ಜು.12ರಿಂದ ಆಷಾಢ ಶುಕ್ರವಾರ: ಸಿದ್ಧತೆ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.22:- ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2024ನೇ ಸಾಲಿನ ಆಷಾಢ ಶುಕ್ರವಾರ ಮತ್ತು ದೇವಿಯ ಜನ್ಮೋತ್ಸವ (ವರ್ಧಂತಿ) ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜುಲೈ 12, ಜುಲೈ 19, ಜುಲೈ 26ರಂದು ಕ್ರಮವಾಗಿ ಮೊದಲನೇ, ಎರಡನೇ ಹಾಗೂ ಮೂರನೇ ಆಷಾಢ ಶುಕ್ರವಾರ ಬರಲಿದೆ. ಜುಲೈ 27ರಂದು (ಶನಿವಾರ) ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ನಡೆಯಲಿದೆ. ಆ.2ರಂದು ಕೊನೆಯ ಆಷಾಢ ಶುಕ್ರವಾರಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇದೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜುಲೈ ಮೊದಲ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳ ಜೊತೆ ಪೂರ್ವ ಸಿದ್ಧತೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ನಿಗಾ ವಹಿಸಬೇಕು: ಚಾಮುಂಡಿ ಬೆಟ್ಟದಲ್ಲಿ ದಾಸೋಹ ಭವನದಲ್ಲಿ ನಡೆಯುವ ಪ್ರಸಾದ ವಿತರಣಾ ಕಾರ್ಯಕ್ರಮದ ಜೊತೆಗೆ ಭಕ್ತರು ಸಹ ಅಲ್ಲಲ್ಲಿ ಪ್ರಸಾದ ವಿತರಣೆ ಮಾಡುತ್ತಾರೆ. ಆಹಾರದ ಸುರಕ್ಷತೆಗೆ ಗಮನ ಕೊಡಬೇಕು. ಇತ್ತ ಆಹಾರ ಸುರಕ್ಷತಾ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಹೇಳಿದರು.
ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ಪಾರ್ಕಿಂಗ್ ಅನ್ನು ಕ್ರಮಬದ್ಧವಾಗಿ ಮಾಡಿಸಬೇಕು. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೆಟ್ಟಕ್ಕೆ ಬರುವವರು ಪ್ಲಾಸ್ಟಿಕ್‍ಗಳನ್ನು ತರುವಂತಿಲ್ಲ ಎಂದು ತಿಳಿಸಿದರು.
ಬೆಟ್ಟದಲ್ಲಿ ಯಾವುದೇ ಪ್ಲೆಕ್ಸ್ ಅಥವಾ ಬ್ಯಾನರ್‍ಗಳನ್ನು ಅಳವಡಿಸುವಂತಿಲ್ಲ. ಪಾಸ್ ವ್ಯವಸ್ಥೆ ಇರುವುದಿಲ್ಲ. ಎಲ್ಲರಿಗೂ ದೇವಿಯ ದರ್ಶನ ಸುಗಮವಾಗಿ ಆಗುವಂತೆ ಕ್ರಮ ವಹಿಸಬೇಕು. ಪೆÇಲೀಸ್ ಇಲಾಖೆಯವರು ಭದ್ರತೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.