ಜಮೀನು ದಾರಿ ಸುತ್ತೋಲೆ ಕಡೆಗಣನೆ: ಜಮೀನು ದಾರಿ ಮಾಡಿಕೊಡಲು ತಹಸೀಲ್ದಾರರಿಗೆ ಸೂಚನೆ ನೀಡಲು ರೈತ ಸಂಘ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.22: ಜಮೀನು ದಾರಿಗಾಗಿ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ತಹಸೀಲ್ದಾರರು ಕಡೆಗಣನೆ ಮಾಡುತ್ತಿದ್ದು, ಇದರಿಂದ ಜಮೀನು ದಾರಿ ಸಮಸ್ಯೆ ಇತ್ಯರ್ಥವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಜಮೀನು ದಾರಿ ಮಾಡಿಕೊಡಲು ತಹಸೀಲ್ದಾರರಿಗೆ ಸೂಚನೆ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ರೈತರು ಜಮೀನುಗಳಿಗೆ ದಾರಿ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದು, ದಾರಿ ಇಲ್ಲದ ಜಮೀನುಗಳಿಗೆ ಇಜಮೆಂಟ್ ಆ್ಯಕ್ಟ 1882 ಸಿಆರ್‍ಪಿಸಿ 1973 ಸೆಕ್ಷನ್ 147 ಪ್ರಕಾರ ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿ ಒಂದು ವರ್ಷ ಸಮೀಪಿಸುತ್ತಿದ್ದರೂ ಯಾವೊಬ್ಬ ತಹಸೀಲ್ದಾರರು ಸರ್ಕಾರದ ಸುತ್ತೋಲೆಯಂತೆ ದಾರಿ ಮಾಡಿ ಕೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ನಿಯಮ 59ರ ಅಡಿಯಲ್ಲಿ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಿದ್ದರೂ ಕೂಡ ತಹಸೀಲ್ದಾರರು ದಾರಿಮಾಡಿಕೊಡುತ್ತಿಲ್ಲ ಎಂದು ದೂರಿದರು.
ದಾರಿಗಾಗಿ ರೈತರು ಅರ್ಜಿ ಸಲ್ಲಿಸಿದರೆ ಅನವಶ್ಯಕವಾಗಿ ವಿಳಂಬ ನೀತಿ ಅನುಸರಿಸಲು ಸರ್ವೆ ಇಲಾಖೆಗೆ ಪತ್ರ ಬರೆಯುತ್ತಿದ್ದಾರೆ. ದಾರಿ ಇದೆಯೋ ಇಲ್ಲವೋ ಎಂಬುದನ್ನು ಸರ್ವೆ ಮಾಡಿ ವರದಿಕೊಡಿ ಎಂದು ಎಡಿಎಲ್‍ಆರ್‍ಗೆÉ ಪತ್ರ ಬರೆಯುತ್ತಿದ್ದಾರೆ. ಭೂ ಮಾಪಕರು ಅಳತೆ ಮಾಡಿ ದಾರಿ ಇಲ್ಲವೆಂದು ತಹಸೀಲ್ದಾರರಿಗೆ ಪತ್ರ ಬರೆಯುತ್ತಾರೆ. ಅದರಂತೆ ತಹಶೀಲ್ದಾರರು ಕೂಡ ದಾರಿಗಾಗಿ ಅರ್ಜಿ ಸಲ್ಲಿಸಿದ ರೈತರಿಗೆ ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲ ಎಂದು ಹಿಂಬರಹ ಕೊಡುತ್ತಾರೆ. ಸರ್ಕಾರ ಸುತ್ತೋಲೆ ಹೊರಡಿಸಿರುವುದು ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡಬೇಕೆಂದು ಅನುಭೋಗದ ಹಕ್ಕಿನ ಪ್ರಕಾರ ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಿದೆ. ತಹಸೀಲ್ದಾರರು ಇದನ್ನು ಗಮನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಗೊಂದಲ ಪರಿಸ್ಥಿತಿ ಮುಂದುವರೆದರೆ ಹಳ್ಳಿಗಳಲ್ಲಿ ದಾರಿಗಾಗಿ ರೈತರ ಮಧ್ಯೆ ಹೊಡೆದಾಟ ನಡೆಯುತ್ತವೆ. ಇಂತಹ ಗಂಭೀರವಾದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಸ್ಪಷ್ಟವಾದ ಆದೇಶವನ್ನು ಮತ್ತೊಮ್ಮೆ ಹೊರಡಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕು. ಮತ್ತು ದಾರಿ ವಿಷಯವಾಗಿ ಸುಗ್ರೀವಾಜ್ಞೆ ಹೊರಡಿಸಬೇಕು. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಒಂದು ವೇಳೆ ದಾರಿ ಸಮಸ್ಯೆಯನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ ಮತ್ತೆ ದಾರಿಗಾಗಿ ಉಗ್ರÀ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಪ್ಪ ಮನಗೂಳಿ, ರೇವಣೆಪ್ಪ ಮನಗೂಳಿ, ಶರಣಪ್ಪ ಮನಗೂಳಿ, ಬಸವರಾಜ ಕುಂಬಾರ, ಮಾಚಪ್ಪ ಹೊರ್ತಿ, ಮೈಬೂಬ ಅವಟಿ, ಸಿದ್ದಪ್ಪ ಕಲಬೀಳಗಿ, ಪ್ರಭು ಬಸ್ತವಾಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.