ಗುಣಾತ್ಮಕತೆಯು ಪ್ರಗತಿಗೆ ಪೂರಕ: ಡಾ. ಶೂಜಾವುದ್ದೀನ್ ನಸೀಮಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.22 :ಗುಣಾತ್ಮಕ ಶಿಕ್ಷಣದ ಲಭ್ಯತೆಯಿಂದ ಮೇಲ್ಮಟ್ಟಕ್ಕೇರಲು ಸಾಧ್ಯ. ಭಾರತ ದೇಶವು ಇಂದು ಪ್ರಗತಿಪಥದತ್ತ ದಾಪುಗಾಲಿಡುತ್ತಿದೆ ಈ ನಿಟ್ಟಿನಲ್ಲಿ ನಾವು ಗುಣಾತ್ಮಕತೆಯೊಂದಿಗೆ ಸಾಗದಿದ್ದರೆ ಹಿನ್ನಡೆ ಅನುಭವಿಸಬೇಕಾಗುತ್ತದೆ. ಉತ್ತಮ ಶಿಕ್ಷಣ ಉತ್ತಮ ಭವಿಷ್ಯಕ್ಕೆ ಕಾರಣ” ಎಂದು ಸಿಕ್ಯಾಬ್ ಸಂಸ್ಥೆಯ ನಿರ್ದೇಶಕ ಹಾಗೂ ಕಾಲೇಜಿನ ಹಳೆಯ ಪ್ರಭಾವಂತ ವಿದ್ಯಾರ್ಥಿ ಡಾ ಶೂಜಾವುದ್ದೀನ್ ನಸೀಮಿ ಹೇಳಿದರು,
ನಗರದ ತಾಜಬಾವಡಿ ಹಿಂಬದಿಯ ಸಿಕ್ಯಾಬ್ ಪದವಿ ಪೂರ್ವ ಕಾಲೇಜಿನಲ್ಲಿ ‘ಸ್ನ್ಯಾಪ್’ ರಾಷ್ಟ್ರೀಯ ಶಿಕ್ಷಣ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಎನ್.ಎಸ್. ಭೂಸನೂರ ಅವರು ಡಾ. ಶೂಜಾವುದ್ದೀನರ ಪರಿಕಲ್ಪನೆಯ ‘ಸ್ನ್ಯಾಪ್’ ಯೋಜನೆಯು ಬಹೂಪಯೋಗಿಯಾಗಿದ್ದು ವಿಶಿಷ್ಟ ತರಬೇತಿಯ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿಕೊಳ್ಳುವಲ್ಲಿ ಸಹಾಯಕಾರಿಯಾಗಿದೆ ಎಂದು ನುಡಿದರು.
ಕಾಲೇಜಿನ ಪ್ರಾಚಾರ್ಯೆ ಸುಜಾತಾ ಕಟ್ಟಿಮನಿ ಅವರು ಮಾತನಾಡಿ, ಯೋಜನೆಯ ಗುಣಾತ್ಮಕ ಶಿಕ್ಷಣ ಪಡೆದುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಸಂಯೋಜಕ ಎಸ್.ಎಂ. ಜೈನ್ ಮತ್ತು ಎಸ್.ಎಂ. ಲಾಹೋರಿ ಯೋಜಿತ ಕಾರ್ಯದ ಉದ್ದೇಶ ಮತ್ತು ರೂಪರೇಷೆಗಳ ಕುರಿತು ತಿಳಿಸಿದರು.
ಉಪನ್ಯಾಸಕಿ ಸೀಮಾ ಇನಾಮದಾರ ಸ್ವಾಗತಿಸಿದರು. ಕುಮಾರ ಅಬ್ದುತಯ್ಯಬ ಕುರಾನ್ ಪಠಿಸಿದರು. ಕುಮಾರಿ ಸಾನಿಯಾ ಕುರೇಶಿ ನಿರೂಪಿಸಿ, ವಂದಿಸಿದರು.