ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ಪ್ರದರ್ಶನ
ಸಂಜೆವಾಣಿ ನ್ಯೂಸ್
ನಂಜನಗೂಡು.ಜೂ.22:- ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ನೂರಾರು ಯೋಗಬಂಧುಗಳು ಭಾಗವಹಿಸಿದರು.
ಸಮಿತಿಯ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ನೇತೃತ್ವದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಸಮಿತಿಯ ಯೋಗಬಂಧುಗಳು ಸಮವಸ್ತ್ರಧಾರಿಯಾಗಿ ಪಾಲ್ಗೊಂಡು ಗಮನ ಸೆಳೆದರೆ, ಕಸ್ತೂರಬಾ ಬಾಲಕಿಯರ ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಪ್ರಸಕ್ತ ಬಾರಿ ಸರ್ಕಾರ ತನಗಾಗಿ ಹಾಗೂ ಸಮಾಜಕ್ಕಾಗಿ ಧ್ಯೇಯಘೋಷದೊಂದಿಗೆ ಜೋಡಿಸಿರುವ ಶಿಷ್ಟಾಚಾರದ ಆಸನಾಭ್ಯಾಸ, ಪ್ರಾಣಾಯಾಮ ಹಾಗೂ ಧ್ಯಾನ ಕ್ರಿಯೆಗಳನ್ನು ಎಲ್ಲರೂ ಸಾಮೂಹಿಕವಾಗಿ ಅಭ್ಯಾಸ ಮಾಡಿದರು.
ಸಾಮೂಹಿಕ ಯೋಗಾಭ್ಯಾಸಕ್ಕೆ ಚಾಲನೆ ನೀಡಿದ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಕುಮಾರ್ ಬೆನ್ನೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಬದಲಾದ ಜೀವನಶೈಲಿಯೇ ಕಾರಣ. ನಿಯಮಿತ ಯೋಗ, ಆಹಾರ ಕ್ರಮವನ್ನು ನಾವು ಅಳವಡಿಸಿಕೊಳ್ಳದೇ ಮೈಮರೆಯುತ್ತಿರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮಾನಸಿಕ ಖಿನ್ನತೆಗೆ ಯೋಗವೇ ಮದ್ದು ಎಂಬುದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನಡೆದಿರುವ ಅನೇಕ ಸಂಶೋಧನೆಗಳ ಮೂಲಕ ರುಜುವಾತಾಗಿದೆ. ಓಂಕಾರ ಧ್ಯಾನದ ಮೂಲಕ ನಮ್ಮ ನರಮಂಡಲ ಉದ್ದೀಪನಗೊಂಡು ಚೈತನ್ಯ ಶಕ್ತಿ ಹೆಚ್ಚುವ ಜತೆಗೆ ಖಿನ್ನತೆಯಿಂದ ಬಳಲು ಅನೇಕರು ಸಹಜ ಸ್ಥಿತಿಗೆ ಮರಳಿರುವುದರಿಂದ ಸಂಶೋಧನೆಯಲ್ಲಿ ದೃಢಪಟ್ಟಿದೆ. ಹಾಗಾಗಿ ಎಲ್ಲರೂ ಸರಿಯಾದ ಗುರುವಿನ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಮಾತನಾಡಿ, ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಮಾಡುವ ಆಸನಗಳನ್ನು ಅತ್ಯಂತ ಪ್ರೀತಿಯಿಂದ ಮಾಡಬೇಕು. ಮಾಡುವುದನ್ನು ಗಮನಿಸಿ ಅನುಭವಿಸಿ ಆನಂದಿಸುವುದನ್ನು ಕಲಿಯುವುದೇ ನಿಜವಾದ ಯೋಗ ಕ್ರಮ. ನಾವು ದ್ವೇಷ, ಅಸೂಹೆ, ಕೋಪದ ಕಡೆ ಹೆಚ್ಚು ಕೇಂದ್ರೀಕರಿಸುತ್ತಿದ್ದೇವೆ. ಅವೆಲ್ಲವನ್ನೂ ತ್ಯಜಿಸಿ ಪ್ರೀತಿ, ಕರುಣೆ, ದಯೆ ಗುಣಗಳತ್ತ ಮುಖ ಮಾಡಿದರೆ ನಮ್ಮ ಆರೋಗ್ಯ ಸುಧಾರಣೆ ಜತೆಗೆ ಉತ್ತಮ ಜೀವನ ಕಂಡುಕೊಳ್ಳಲು ಸಹಕಾರಿಯಾಗಲಿದೆ. ನಮ್ಮ ಪೂರ್ವಿಕರು ಕಟ್ಟಿಕೊಟ್ಟಿರುವ ಜೀವನ ಪದ್ಧತಿ ಅತ್ಯಂತ ವೈಜ್ಞಾನಿಕತೆಯಿಂದ ಕೂಡಿದೆ. ಅದರಿಂದ ನಾವು ವಿಮುಖರಾಗಿ ಆಧುನಿಕ ಜೀವನಶೈಲಿಗೆ ಮಾರುಹೋಗದಂತೆ ಎಚ್ಚರವಹಿಸಬೇಕಿದೆ ಎಂದರು.
ಆಯುಷ್ ಇಲಾಖೆ ತಾಲೂಕು ನೋಡಲ್ ಅಧಿಕಾರಿ ಡಾ.ಅಶೋಕ್‍ಕುಮಾರ್ ಮಾತನಾಡಿ, ನಾವು ಆರೋಗ್ಯವಾಗಿದ್ದರೆ ಸಾಲದು ನೆರೆಹೊರೆಯವರೂ ಆರೋಗ್ಯವಾಗಿರಬೇಕು ಎಂಬುದನ್ನು ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಮನವರಿಕೆಯಾಗಿದೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಈ ಬಾರಿ ತನಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಉತ್ತಮ ಸಮಾಜ ಕಟ್ಟುವ ಕಾಯಕದಲ್ಲಿ ಎಲ್ಲರೂ ಭಾಗಿಯಾಗೋಣ ಎಂದು ಹೇಳಿದರು.
ಇನ್ನು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ದಿನವಿಡೀ ಯೋಗ ಅರಿವು ಅಭಿಮಾನ ನಡೆಯಿತು. ನ್ಯಾಯಾಲಯ ಸಂಕೀರ್ಣ, ವಿಸ್ಡಂ ಶಾಲೆ, ಕಾರ್ಮೆಲ್ ಶಾಲೆ, ಲಯನ್ಸ್ ಶಾಲೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಐಟಿಸಿ ಕಾರ್ಖಾನೆ, ಎಫ್‍ಸಿಐ ಸೇರಿದಂತೆ ಹಲವೆಡೆ ಸಮಿತಿಯ ಯೋಗ ಶಿಕ್ಷಕರ ನೇತೃತ್ವದಲ್ಲಿ ಯೋಗಾಭ್ಯಾಸದೊಂದಿಗೆ ಅರಿವು ಮೂಡಿಸಲಾಯಿತು
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶ್‍ಮೂರ್ತಿ, ನಂಜನಗೂಡು ಯೋಗ ಫೌಂಡೇಶನ್ ಅಧ್ಯಕ್ಷ ಡಿಗ್ಗನೇಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.