ಶ್ರಮ ಸಂಸ್ಕøತಿಯ ಗೌರವದ ಪ್ರತೀಕದ ಕಾರ ಹುಣ್ಣಿಮೆ
ಕಲಬುರಗಿ:ಜೂ.21: ರೈತ ದೇಶದ ಆಧಾರ ಸ್ಥಂಭ. ಕೃಷಿ ಕಾರ್ಯದ ಪ್ರಮುಖವಾದ, ರೈತನ ಎರಡು ಕಣ್ಣುಗಳಂತಿರುವ, ಆತ ಬೆಳೆಯುವ ಪ್ರತಿ ಕಾಳಿನಲ್ಲಿ ತನ್ನದೆ ಆದ ಅದ್ವೀತಿಯ ಶ್ರಮವನ್ನು ಹೊಂದಿರುವ ಎತ್ತುಗಳನ್ನು ಪೂಜಿಸಿ, ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುವ, ಎತ್ತುಗಳ ಶ್ರಮವನ್ನು ಗೌರವಿಸುವ ಪ್ರತೀಕದ ರೈತನ ಪ್ರಮುಖ ಹಬ್ಬವೇ ಕಾರ ಹುಣ್ಣಿಮೆಯಾಗಿದೆ ಎಂದು ಕಜಾಪ ಜಿಲ್ಲಾದ್ಯಕ್ಷ ಎಂ.ಬಿ.ನಿಂಗಪ್ಪ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ತೋಟದಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಕಾರ ಹುಣ್ಣಿಮೆ ಉತ್ಸವ’ : ಪ್ರಗತಿಪರ ರೈತರಿಗೆ ಸತ್ಕಾರ ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಹಾಗೂ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಮಾತನಾಡುತ್ತಾ, ಭಕ್ತಿಯಿಂದ ಕೆಲಸ ಮಾಡುವವರಿಗೆ ಭೂತಾಯಿ ಎಂದಿಗೂ ಕೂಡಾ ನಷ್ಟ ಉಂಟು ಮಾಡುವುದಿಲ್ಲ. ಕೃಷಿಯ ಬಗ್ಗೆ ಅಸಡ್ಡೆ ಬೇಡ. ಎತ್ತುಗಳ ಶ್ರಮವನ್ನು ಮರೆಯಬಾರದು. ಯಾಂತೀಕರಣದ ಇಂದಿನ ಯುಗದಲ್ಲಿ ಅವುಗಳ ಕಡೆಗಣನೆ ಬೇಡ. ಎಲ್ಲರಿಗೆ ಅನ್ನವನ್ನು ನೀಡುವ ಕೃಷಿ ಪರಂಪರೆ ದೊಡ್ಡದು. ರೈತ ತನ್ನ ಎತ್ತುಗಳನ್ನು ದೇವರ ರೂಪದಲ್ಲಿ ಕಂಡು ಧನ್ಯತೆಯನ್ನು ಸಮರ್ಪಿಸುವ ಸಂಪ್ರದಾಯ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ರೈತ ಶಾಂತಪ್ಪ ಚೇಂಗಟಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ರೈತ ಗೀತೆಗಳನ್ನು ಹಾಡಲಾಯಿತು. ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಜಗದೀಶ ವಂಟಿ, ಸುಷ್ಮಾ ಕೆ.ಚೇಂಗಟಿ, ರವಿ ಚೇಂಗಟಿ, ದತ್ತಪ್ಪ ನಡವಿನಕೇರಿ, ಪಂಡಿತ ಧನ್ನಿ, ರೇವಣಸಿದ್ದಪ್ಪ ಸಂಗೋಳಗಿ, ಪಂಡಿತ ದೊಡ್ಡಮನಿ, ಶಿವಕುಮಾರ ಚೇಂಗಟಿ, ಸಂತೋಷ ಡೋಣಿ, ಸುವರ್ಣಾ ಚೇಂಗಟಿ, ಸರಸ್ವತಿ ಡೋಣಿ, ಕಮಲಾಬಾಯಿ, ಸಂಗೀತಾ, ಸಂಗಮ್ಮ ಧನ್ನಿ ಸೇರಿದಂತೆ ಮತ್ತಿತರರಿದ್ದರು.