ದೇಹ ಮತ್ತು ಮನಸ್ಸನ್ನು ಯೋಗವು ಪ್ರಪುಲ್ಲಗೊಳಿಸುತ್ತದೆ : ಶ್ರೀಕಾಂತ ಕೆ.ಎಸ್.
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.22:ಯೋಗವೆಂದರೆ ಕೇವಲ ವ್ಯಾಯಾಮವಲ್ಲ. ಮಾನಸಿಕ ಏಕಾಗ್ರತೆಗೊಳಿಸಿ ಮನಸ್ಸಿಗೆ ಮುದ ನೀಡುತ್ತದೆ. ಮನಸ್ಸು ಉತ್ಸಾಹಗೊಂಡರೆ ದೇಹಕ್ಕೆ ಚೈತನ್ಯ ಬರುತ್ತದೆ. ಕ್ರಮಬದ್ಧ ಯೋಗಾಸನದಲ್ಲಿ ತೊಡಗಿಕೊಂಡರೆ ದೈಹಿಕ ಆಯಾಸ ನೀಗಿ ಭೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳಬಹುದೆಂದು ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ನುಡಿದರು.
ವಿಜಯಪುರ ನಗರದ ಕೆ.ಎಸ್.ಆರ್.ಟಿ.ಸಿ ಕಾಲೋನಿಯಲ್ಲಿ ಇರುವ ಎಕ್ಸಲಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಅಂತರಾಷ್ಟೀಯ ಯೋಗ ದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಋಷಿ ಮುನಿಗಳು ಯೋಗವನ್ನು ಬಲ್ಲವರಾಗಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ ಇಡೀ ವಿಶ್ವವೇ ಇಂದು ಯೋಗ ದಿನದಲ್ಲಿ ಪಾಲ್ಗೊಳ್ಳುವಂತಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ದಿನ ನಿತ್ಯ ಯೋಗಾಸನ ಮಾಡಬೇಕೆಂದು ಕರೆ ನೀಡಿದರು.
ವಿಪ್ಪಾಸನಯೋಗ ಸೇವಾ ಸಂಸ್ಥೆಯ ಯೋಗ ಪಟು ಭೂಮಿಕಾ ರೋಹಿತೆ ಮಾತನಾಡಿ, ಯೋಗ ಬಲ್ಲವರಿಗೆ ರೋಗವಿಲ್ಲ. ಜಾಗತಿಕ ಯೋಗಕ್ಕೆ ಈಗ ದಶಕದ ಸಂಭ್ರಮ. ದೈನಂದಿನ ಒತ್ತಡ ಬದುಕಿನಿಂದ ಮುಕ್ತ ವಾತಾವರಣಕ್ಕೆ ಒಗ್ಗುವಂತೆ ಯೋಗ ನಮ್ಮನ್ನು ತಯಾರುಗೊಳಿಸುತ್ತದೆ ಎಂದು ನುಡಿದು ಸೂರ್ಯನಮಸ್ಕಾರ ಪದ್ಮಾಸನ, ಮಯೂರಾಸನ ಮುಂತಾದ ಆಸನಗಳ ಜೊತೆಗೆ ಪ್ರಾಣಾಯಾಮವನ್ನು ಹೇಳಿಕೊಟ್ಟರು. ಯೋಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯಗಳ ಮೇಲ್ವಿಚಾರಕರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.