ಯೋಗದಿಂದ ಮಾತ್ರ ಸದೃಢ ಆರೋಗ್ಯ
ಕಲಬುರಗಿ:ಜೂ.21: ಪ್ರತಿದಿನವೂ ತಪ್ಪದೆ ನಿಯಮಿತವಾಗಿ ಯೋಗಭ್ಯಾಸ ಮಾಡುವುದರಿಂದ ಸದೃಢ ಆರೋಗ್ಯವಾಗಿರಲು ಸಾಧ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಯೋಗ ತರಬೇತುದಾರರಾದ ಡಾ. ಚಂದ್ರಕಾಂತ ಬಿರಾದಾರ ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ಸ್ವಂತ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧೇಯವಾಕ್ಯದ 10ನೇ ಅಂತರರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಯೋಗವು ಒಂದುಗೂಡಿಸುತ್ತದೆ. ಇದು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆಯನ್ನು ಒಳಗೊಂಡಿರುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೋಗವು ದೇಹದೊಡನೆ ಕಾರ್ಯ ನಿರ್ವಹಿಸುವುದಲ್ಲದೆ, ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಬೌದ್ಧಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಶಿಸ್ತುಬದ್ಧ, ಸಂತೋಷದ ಜೀವನ ಮತ್ತು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಯೋಗದೊಂದಿಗೆ ಸತ್ವಯುತ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಆಧುನಿಕ ಜೀವನಶೈಲಿ ಪದ್ಧತಿಯಿಂದ ಹಲವು ರೋಗಕ್ಕೆ ನಾವು ತುತ್ತಾಗುತ್ತಿದ್ದು, ಇದರಿಂದ ಹೊರ ಬರಬೇಕಾದರೆ ಯೋಗದಿಂದ ಮಾತ್ರ ಸಾಧ್ಯ ಶರಣಬಸವೇಶ್ವರ ಸಂಸ್ಥಾನ ಯೋಗದ ಅಧ್ಯಾಯನಕ್ಕೆ ಹೆಚ್ಚು ಒತ್ತು ಕೊಡುತ್ತದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದನ್ನು ರೂಢಿಸಿಕೊಳ್ಳಿ ಇದರಿಂದ ನೀವು ಆರೋಗ್ಯವಾಗಿರುವುದಲ್ಲದೆ ಸಮಾಜವನ್ನು ಆರೋಗ್ಯವಾಗಿಡಲು ಸಹಾಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ವೇದಿಕೆ ಮೇಲೆ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿಗಳಾದ ಶ್ರೀಮತಿ ಕಲ್ಪನಾ ಡಿ.ಮಹೇಂದ್ರಕರ್ ಮತ್ತು ಶ್ರೀಮತಿ ದೀಶಾ ಮೆಹತಾ ಇದ್ದರು.
ಕ್ರೀಡಾ ವಿಭಾಗದ ಪ್ರಾಧ್ಯಾಪಕ ಡಾ.ಮಿಲಿಂದ ಸುಳ್ಳದ ಸ್ವಾಗತಿಸಿದರೆ, ಕುಮಾರಿ ಜವೇರಿಯಾ ಅಂಜುಮ ನಿರೂಪಿಸಿ, ವಂದಿಸಿದರು. ಕು.ಪೂಜಾ ಪ್ರಾರ್ಥಿಸಿದರು.