ಕಾರ ಹುಣ್ಣಿಮೆ: ಎತ್ತುಗಳ ಅಲಂಕಾರಿಕ ವಸ್ತುಗಳು ಖರೀದಿಯಾಗದೆ ವ್ಯಾಪಾರಸ್ಥರು ಕಂಗಾಲು
ವಾಡಿ,ಜೂ.21-ಕಾರ ಹುಣ್ಣಿಗೆ ರೈತರ ಹಬ್ಬ. ಈ ಹಬ್ಬದಂದು ಎತ್ತುಗಳ ಮೈ ತೊಳೆದು, ವಿವಿಧ ರೀತಿಯ ಬಣ್ಣ ಬಳಿದು, ಅಲಂಕಾರ ಮಾಡಿ ಕರಿ ಹರಿಯುವುದು ಸಂಪ್ರದಾಯ. ಆದರೆ ಈ ಬಾರಿ ರೈತರಲ್ಲಿ ಅಷ್ಟೊಂದು ಸಂಭ್ರಮ ಕಂಡು ಬರುತ್ತಿಲ್ಲ. ಎತ್ತುಗಳ ಅಲಂಕಾರಕ್ಕೆ ಬೇಕಾದ ವಸ್ತುಗಳ ಖರೀದಿ ಅಷ್ಟೇನು ಆಗಿಲ್ಲ. ಇದರಿಂದಾಗಿ ಮಹಾರಾಷ್ಟ್ರದ ಲಾತೂರ ಜಿಲ್ಲೆಯ ದೇವಣಿ ಗ್ರಾಮದಿಂದ ಎತ್ತುಗಳ ಅಲಂಕಾರಿಕ ವಸ್ತುಗಳ ಮಾರಾಟಕ್ಕೆ ಬಂದ ವ್ಯಾಪಾರಸ್ಥರಲ್ಲಿ ನಿರಾಸೆ ಮೂಡಿಸಿದೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ತಂದಿದ್ದೇವೆ. ಆದರೆ ಇಲ್ಲಿ ನೋಡಿದರೆ ಅಷ್ಟೇನು ವ್ಯಾಪಾರವಾಗುತ್ತಿಲ್ಲ. ಇಲ್ಲಿಗೆ ಬಂದು ಹೋಗುವ ಖರ್ಚು ಸರಿದೂಗುತ್ತದೋ ಇಲ್ಲವೋ ಎಂಬ ಚಿಂತಿ ಕಾಡುತ್ತಿದೆ ಎಂದು ವ್ಯಾಪಾರಸ್ಥರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ವ್ಯಾಪಾರ, ವಹಿವಾಟು ಚೆನ್ನಾಗಿ ಆಗುತ್ತದೆ ಎಂದು ಮಹಾರಾಷ್ಟ್ರದಿಂದ ಇಲ್ಲಿಗೆ ಆಗಮಿಸಿದ ವ್ಯಾಪಾರಸ್ಥರಿಗೆ ಈ ಬಾರಿ ನಿರಾಸೆಯಾದಂತಾಗಿದೆ.