ಹೋಟೆಲ್‍ನಲ್ಲಿ ಸಿಲಿಂಡರ್ ಸ್ಫೋಟ: 10 ಜನರಿಗೆ ಗಂಭೀರ ಗಾಯ
ಕಲಬುರಗಿ,ಜೂ.21-ನಗರದ ಶರಣಬಸವೇಶ್ವರ ಕೆರೆ ಪಕ್ಕದ ಸಪ್ತಗಿರಿ ಹೋಟೆಲ್‍ನಲ್ಲಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟ್‍ಗೊಂಡಿದ್ದು, ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ 10 ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೋಟೆಲ್‍ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಶಿಕಲಾ, ರಮೇಶ್ ಫಿರೋಜಾಬಾದ, ಅಂಬಿಕಾ, ಮಲ್ಲಿನಾಥ, ರಾಕೇಶ್, ಶಂಕರ್, ಗುರುಮೂರ್ತಿ, ಪ್ರಶಾಂತ್, ಸತ್ಯವಾನ್, ಅಪ್ಪಾರಾಯ, ಮಲ್ಲಿನಾಥ, ವಿಠ್ಠಲ, ಮಹೇಶ್ ಮತ್ತು ಲಕ್ಷ್ಮಣ ಎಂಬುವವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಡುಗೆ ಅನಿಲ ಸಿಲಿಂಡರ್ ಖಾಲಿಯಾದುದ್ದರಿಂದ ಬೇರೊಂದು ಸಿಲಿಂಡರ್‍ಗೆ ಪೈಪ್ ಕನೆಕ್ಷನ್ ಕೊಡುವಾಗ ಸಿಲಿಂಡರ್ ಸ್ಫೋಟ್‍ಗೊಂಡಿದೆ ಎಂದು ತಿಳಿದುಬಂದಿದ್ದು, ನೆಲ ಮಹಡಿಯ ಕಿಚನ್ ರೂಮ್‍ನಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಹೋಟೆಲ್‍ನ ಬಾಗಿಲು, ಕಿಟಕಿ ಒಡೆದು ನುಚ್ಚು ನೂರಾಗಿವೆ.
ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಆರ್.ಚೇತನ್, ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.