ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದ ಎಲ್ಲ ಆಯಾಮಗಳಲ್ಲಿ ಗಾಢ ಪರಿಣಾಮ ಬೀರಿದೆ:ಪ್ರೊ. ತುಳಸಿಮಾಲ
ವಿಜಯಪುರ,ಜೂ.21: ಶಿಕ್ಷಣ ಕ್ಷೇತ್ರದ ಎಲ್ಲಾ ಆಯಾಮಗಳಲ್ಲಿಯೂ ತಂತ್ರಜ್ಞಾನ ತನ್ನದೇ ಆದ ಗಾಢ ಪ್ರಭಾವ ಬೀರಿದೆ. ಕಲಿಕೆ, ಬೋಧನೆ ಮತ್ತು ಬೋಧನಾ ಕ್ರಮಗಳು ಮತ್ತು ಸಂಪನ್ಮೂಲಗಳು ತಂತ್ರಜ್ಞಾನ ಕೇಂದ್ರೀಕೃತವಾಗಿವೆ ಎಂದು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಮತ್ತು ಆನ್‍ಲೈನ್ ಶೈಕ್ಷಣಿಕ ಸಂಪನ್ಮೂಲಗಳ ಕೇಂದ್ರ (ಓಇಆರ್‍ಸಿ) ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೆಬ್‍ಸೈಟ್ ಲೋಕಾರ್ಪಣೆ ಮತ್ತು ಬೋಧಕ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ವಿವಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಆರಂಭಿಸಲಾಗಿರುವ ಈ ಓಇಆರ್‍ಸಿ ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಕಷ್ಟ ಕಾಲದಲ್ಲಿ ನೆರವಾಗಿದೆ. ಆರಂಭದಲ್ಲಿ ಕೆ-ಸೆಟ್ ಪರೀಕ್ಷಾ ತರಬೇತಿಗಾಗಿ ಹಮ್ಮಿಕೊಂಡಿದ್ದ ವಿಡಿಯೋ ಪಾಠಗಳಲ್ಲಿ ಬೇರೆ ಬೇರೆ ವಿವಿಗಳ ವಿದ್ಯಾರ್ಥಿನಿಯರು ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಓಇಆರ್‍ಸಿ ಅಭಿವೃದ್ಧಿ ಪಡಿಸಿರುವ ವೆಬ್‍ಸೈಟ್ ವಿದ್ಯಾರ್ಥಿನಿಯರು ಮತ್ತು ಬೋಧಕರಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಈ ವೇದಿಕೆಯನ್ನು ಇಬ್ಬರೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಬೋಧನೆ ಮತ್ತು ಕಲಿಕೆ ಅರ್ಥಪೂರ್ಣವಾಗುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ್ ಅವರು ಮಾತನಾಡಿದರು.