ವೈಜಿನಾಥ ಕಮಠಾಣೆಗೆ ಬಸವ ಪುರಸ್ಕಾರ
ಬೀದರ್:ಜೂ.21: ಬೆಂಗಳೂರಿನ ಬಸವ ಪರಿಷತ್ ಸಂಸ್ಥೆ ಕೊಡ ಮಾಡುವ ಪ್ರಸಕ್ತ ಸಾಲಿನ ಬಸವ ಪುರಸ್ಕಾರಕ್ಕೆ ಇಲ್ಲಿಯ ಬಸವತತ್ವ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯ ಶರಣ ಜೀವಿ ವೈಜಿನಾಥ ಕಮಠಾಣೆ ಭಾಜನರಾಗಿದ್ದಾರೆ.
ಬೆಂಗಳೂರಿನ ರಾಣಿ ಮಹಾರಾಣಿ ಕಾಲೇಜು ಹತ್ತಿರದ ಕೊಂಡಾಜಿ ಬಸಪ್ಪ ಸಭಾಂಗಣದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಮಠಾಣೆ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು.
ಶಿಕ್ಷಣ, ಬಸವ ತತ್ವ, ವಚನ ಸಾಹಿತ್ಯ ಪ್ರಚಾರ, ಪ್ರಸಾರ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕಮಠಾಣೆ ಅವರನ್ನು ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಕಮಠಾಣೆ ಅವರು 1983ರಲ್ಲಿ ಬೀದರನಲ್ಲಿ ಬಸವತತ್ವ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಬಡ ಹಾಗೂ ಮಧ್ಯಮ ವರ್ಗದ ಬಾಲಕಿಯರಿಗೆ ಶಿಕ್ಷಣ ಕಲ್ಪಿಸಿದರು. ಸಂಸ್ಥೆ ಕ್ರಮೇಣ ಹೆಮ್ಮರವಾಗಿ ಬೆಳೆದಿದ್ದು, ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಕ್ಕಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ.
ಕಮಠಾಣೆ ಹತ್ತು ವರ್ಷಗಳಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷರಾಗಿ, ರೆಡ್ ಕ್ರಾಸ್ ಸಂಸ್ಥೆ ರಾಜ್ಯ ನಿರ್ದೇಶಕರಾಗಿ, ಸಂಸ್ಥೆಯ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲಿಂಗಾಯತ ಅಭಿವೃದ್ಧಿ ಸಂಘ ಜಿಲ್ಲಾ ಉಪಾಧ್ಯಕ್ಷ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಮಾಜ ಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಸವ ಪುರಸ್ಕಾರ ತಮಗೆ ಇನ್ನಷ್ಟು ಸೇವೆ ಮಾಡಲು ಪ್ರೇರಣೆ ನೀಡಿದೆ ಎಂದು ಕಮಠಾಣೆ ಹೇಳಿದ್ದಾರೆ.
ಲಿಂಗಸಗೂರು ಅಂಕಲಗಿ ಮಠದ ವೀರಭದ್ರೇಶ್ವರ ಸ್ವಾಮೀಜಿ, ಬಸವ ಪರಿಷತ್ ಅಧ್ಯಕ್ಷ ಉಮಾದೇವಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಿರೇಮಠ, ಇಸ್ರೋ ಸಂಸ್ಥೆಯ ಎಂ.ಎಚ್.ಎಂ ದ್ವಾರಕೀಶ್, ಹಿರಿಯ ಉದ್ಯಮಿ ಧನರಾಜ ತಾಳಂಪಳ್ಳಿ ಇತರರು ಸಮಾರಂಭದಲ್ಲಿ ಹಾಜರಿದ್ದರು.
ಕಮಠಾಣೆ ಅವರಿಗೆ ಬಸವ ಪುರಸ್ಕಾರ ಸಂದಿರುವುದಕ್ಕೆ ಬಸವತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದಿಲೀಪಕುಮಾರ ಕಮಠಾಣೆ ಹಾಗೂ ಸಂಸ್ಥೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.