ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಜೂ.21: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಉತ್ತಮ ಪ್ರಜೆಗಳನ್ನು ರೂಪಿಸಬೇಕು. ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಗ್ರಾಮೀಣ ಭಾಗದ ಬಹುಪಾಲು ಮಕ್ಕಳು ದೇಶದ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ದೇಶಪಾಂಡೆ ನಗರದಲ್ಲಿ ನೂತನ ಅಂಗನವಾಡಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಭಡಕಂಬಿ ತೋಟದ ಕನ್ನಡ ಪ್ರಾಥಮಿಕ ಶಾಲೆಯ 2 ಹೆಚ್ಚುವರಿ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನಕ್ಕೆ ಏರಬೇಕಾದಲ್ಲಿ ಶಿಕ್ಷಕರು ಮಕ್ಕಳಿಗೆ ಕೊಡುವ ಶಿಕ್ಷಣ ಮತ್ತು ಸಂಸ್ಕಾರ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದ ಅವರು ಭಡಂಕಬಿ ತೋಟದ ಸರಕಾರಿ ಶಾಲೆಯ ಶಿಕ್ಷಕರು ಉತ್ತಮ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಖಾಸಗಿ ಶಾಲೆಗಳಿಂದ ಮಕ್ಕಳು ಕೂಡ ಇಲ್ಲಿ ಪ್ರವೇಶ ಪಡೆಯುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದರು.
ನಮ್ಮಲ್ಲಿ ಅಂಕಗಳ ಆಧಾರಿತ ಶಿಕ್ಷಣ ಪದ್ಧತಿ ಬಂದಿರುವ ಪರಿಣಾಮ ಶಿಕ್ಷಣ ಪದ್ಧತಿ ದಾರಿ ತಪ್ಪುತ್ತಿದೆ ಹೆಚ್ಚು ಹೆಚ್ಚು ಅಂಕ ಗಳಿಸಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ತೆರಳಿ ಅಲ್ಲಿಯೇ ಉದ್ಯೋಗ ಪಡೆದುಕೊಂಡು ಜೊತೆಗೆ ಗ್ರೀನ್ ಕಾರ್ಡ ಪಡೆದು ಅಲ್ಲಿಯೇ ಖಾಯಂ ಉಳಿದುಕೊಳ್ಳುತ್ತಾರೆ ಆದರೆ ಅವರನ್ನೇ ನಂಬಿರುವ ಪಾಲಕರು ಅನಿವಾರ್ಯವಾಗಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯುತ್ತಿರುವುದು ದುರ್ದೈವದ ಸಂಗತಿ ಎಂದರು.
ತಂದೆ, ತಾಯಿ ಮತ್ತು ಶಿಕ್ಷಕರು ಮಕ್ಕಳ ಸವಾರ್ಂಗೀಣ ಅಭಿವೃದ್ದಿಯಲ್ಲಿ ಮಹತ್ವದ ವಹಿಸುತ್ತಾರೆ. ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ಕೊಡಬೇಕು ಆಗ ಮಾತ್ರ ಶಿಕ್ಷಣದ ವ್ಯವಸ್ಥೆ ಬದಲಾಗುತ್ತದೆ ಎಂದ ಅವರು ಈ ನಿಟ್ಟಿನಲ್ಲಿ ಒಳ್ಳೆಯ ಸಂಸ್ಕಾರ ನೀಡುವ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಿ ಎಂದು ಕರೆ ನೀಡಿದರು.
ಈ ವೇಳೆ ಮುಖಂಡರಾದ ಶಿವಾನಂದ ದಿವಾನಮಳ ಮಾತನಾಡಿ ಮೊಬೈಲ್ ಮತ್ತು ವಿಡಿಯೋ ಗೇಮಗಳ ಪರಿಣಾಮ ಮಕ್ಕಳು ವಿನಯ ಮತ್ತು ಸೃಜನಶೀಲತೆ ಕಳೆದುಕೊಳ್ಳುತ್ತಿದ್ದು, ಪಾಲಕರು ಮಕ್ಕಳಿಗೆ ಅಗತ್ಯವಿದ್ದಷ್ಟು ಮಾತ್ರ ಮೊಬೈಲ್ ಕೊಡಬೇಕು ಎಂದ ಅವರು ಶಿಕ್ಷಣದ ಜೊತೆಗೆ ಮಕ್ಕಳಿಗೆ ವಚನಗಳನ್ನು, ಪ್ರಾರ್ಥನೆಯಂತಹ ನೈತಿಕ ಶಿಕ್ಷಣ ಕೊಡಬೇಕು ಆಗ ಮಾತ್ರ ಸಮಾಜದ ಆಸ್ತಿಯಾಗಲು ಸಾಧ್ಯ ಎಂದರು.
ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಅಥಣಿಯಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯ, ಕೇಂದ್ರಿಯ ವಿದ್ಯಾಲಯಗಳನ್ನು ಪ್ರಾರಂಭಗೊಂಡಿವೆ ಎಂದ ಅವರು ಶಾಸಕ ಲಕ್ಷ್ಮಣ ಸವದಿ ಇಂತಹ ಇನ್ನೂ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಿ ಎಂದು ಶುಭ ಹಾರೈಸಿದರು.
ಕೊಠಡಿಗಳನ್ನು ನಿರ್ಮಿಸಿದ ಗುತ್ತಿಗೆದಾರ ರಾಜು ಮರಡಿ ಮತ್ತು ಇನ್ನಿತರ ವಸ್ತುಗಳನ್ನು ದಾನ ನೀಡಿದ ಮಹನೀಯರನ್ನು ಹಾಗೂ ಅಡುಗೆ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು. ಮುಖ್ಯಾಧ್ಯಾಪಕ ಎ.ಎಸ್.ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎ.ಆರ್.ಸವದಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣಾ ವಾಲಿ. ಪುರಸಭಾ ಸದಸ್ಯರಾದ ರಾಜಶೇಖರ ಗುಡೋಡಗಿ ಸಂತೋಷ ಸಾವಡಕರ. ಮಲ್ಲೇಶ ಹುದ್ದಾರ, ದತ್ತಾ ವಾಸ್ಟರ್, ಮುಖಂಡರಾದ ಶಿವರುದ್ರ ಘೂಳಪ್ಪನವರ, ಅರುಣ ಭಾಸಿಂಗಿ. ರವಿ ಭಡಕಂಬಿ. ಮಲ್ಲಿಕಾರ್ಜುನ ಕುಲ್ಲೋಳಿ. ನರಸು ಭಡಕಂಬಿ, ಮಂಜು ಭಜಂತ್ರಿ. ಬಸವರಾಜ ಹಳ್ಳದಮಳ, ತಿಪ್ಪಣ್ಣ ಭಜಂತ್ರಿ, ಸುಭಾಸ್ ಕಾಗಲಿ, ಶಿವು ಚಮಕೇರಿ, ರಮೇಶ ಕಾಗಲಿ, ಗುತ್ತಿಗೆದಾರ ಪಿ.ಬಿ.ಪಾಟೀಲ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.