ಎಸ್ ಬಿ ಆರ್ ನಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕಲಬುರಗಿ:ಜೂ.21:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ, ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜ, ಅಪ್ಪಾ ಪಬ್ಲಿಕ್ ಶಾಲೆ (ಸಿಬಿಎಸ್‍ಇ) ಸಂಯುಕ್ತಾಶ್ರಯದಲ್ಲಿ ಶರಣಬಸವೇಶ್ವರ ಪಬ್ಲಿಕ್ ಶಾಲೆಯ ಪೂಜ್ಯ ದೊಡ್ಡಪ್ಪ ಅಪ್ಪ ಕ್ರೀಡಾಂಗಣದಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾಜಯೋಗಿನಿ ಬಿ.ಕೆ ವಿಜಯಾ ಬೆಹನ್, ಮುಖ್ಯಸ್ಥರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಯೋಗವು ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದು ಹಾಗೂ ಯೋಗವು ಮಾನಸಿಕ ಹಾಗೂ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದರು. ಆದ್ದರಿಂದ ಯೋಗವನ್ನು ದೈನಂದಿನ ಚಟುವಟಿಕೆಯಾಗಿ ಮಾಡಿಕೊಳ್ಳುವುದು ರೂಢಿಯಾಗಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಶ್ರೀ ಶಿವಾನಂದ ಸಾಲಿಮಠ ಅಧ್ಯಕ್ಷರು, ಪತಂಜಲಿ ಯೋಗ ಸಮಿತಿ, ಕಲಬುರಗಿ ಇವರು ಉಪಸ್ಥಿತರಿದ್ದು ಯೋಗ ಪ್ರದರ್ಶನ ನಡೆಸಿಕೊಟ್ಟರು. ದೇಶ ಭಕ್ತಿ ಗೀತೆಯಾದ ರಂಗದೇ ಬಸಂತಿ ಚೋಲಾ……….ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶರಣಬಸವೇಶ್ವರ ಪಬ್ಲಿಕ್ ಶಾಲೆಯ, ಶರಣಬಸವೇಶ್ವರ ವಸತಿ ಪದವಿ ಪೂರ್ವ ಮಹಾವಿದ್ಯಾಲಯದ ಹಾಗೂ ಅಪ್ಪಾ ಪಬ್ಲಿಕ್ ಶಾಲೆಯ ಸುಮಾರು 4000 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ವಹಿಸಿಕೊಂಡಿದ್ದರು. ಕುಮಾರಿ. ಮಹೇಶ್ವರಿ ಎಸ್ ಅಪ್ಪಾ ಉಪಸ್ಥಿತರಿದ್ದರು.
ಈ ಎಲ್ಲಾ ಕಾರ್ಯಕ್ರಮಗಳು ಪ್ರಾಚಾರ್ಯರಾದ ಶ್ರೀ ಎನ್.ಎಸ್.ದೇವರಕಲ್ ರವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದವು.