ಪೆಟ್ರೋಲ್,ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ
ಚನ್ನಮ್ಮನ ಕಿತ್ತೂರು,ಜೂ21: ಪೆಟ್ರೋಲ್,ಡೀಸೆಲ್ ದರ ಏರಿಕೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕ ಚನ್ನಮ್ಮನ ವೃತ್ತದಲ್ಲಿ ಬಿಜೆಪಿ ಮಂಡಳದ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೈಯಲ್ಲಿ ಬೆಲೆ ಏರಿಕೆಯ ಬಿತ್ತಿ ಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ನೇತೃತ್ವ ವಹಿಸಿಕೊಂಡು ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ದರ ಹೆಚ್ಚಿಸಿದೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಎಲ್ಲದರ ಮೇಲೆ ಪರಿಣಾಮ ಬೀರಿದೆ ಇದು ಸರಿಯಾದ ಕ್ರಮವಲ್ಲ. ಸರ್ಕಾರ ಇದೇ ರೀತಿ ಮುಂದುವರೆದರೆ ಜನ ದಂಗೆ ಏಳುವ ಪರಿಸ್ಥಿತಿ ಬರುತ್ತದೆ ಇದಾಗುವ ಪೂರ್ವದಲ್ಲಿ ಸರ್ಕಾರ ಎಚ್ಚೇತ್ತುಕೊಳ್ಳಬೇಕೆಂದರು.
ಮುಖಂಡೆ ಲಕ್ಷ್ಮೀ ಇನಾಮದಾರ ಮಾತನಾಡಿ ತೈಲ ದರ ಏರಿಕೆಯಿಂದ ವಾಹನ ಸವಾರರಿಗೆ ಮಾತ್ರವಲ್ಲ ಸರಕು ಸಾಗಾಣಿಕೆ ಮೇಲೂ ಪರಿಣಾಮ ಬೀರುವುದರ ಜೊತೆಗೆ ಪ್ರಯಾಣದ ದರವು ಹೆಚ್ಚಲಿದೆ. ತರಕಾರಿ ದಿನನಿತ್ಯದ ಗೃಹಬಳಕೆ ವಸ್ತುಗಳು, ದವಸಧಾನ್ಯಗಳು, ಕಟ್ಟಡ ಸಾಮಾಗ್ರಿಗಳ ಬೆಲೆಯು ಹೆಚ್ಚಲಿದೆ. ಇದರಿಂದ ಸರ್ಕಾರ ಜನರನ್ನು ಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ. ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಮೂಲಕ ನಾವು ಸರ್ಕಾರ ನಡೆಸುತ್ತೇವೆಂದು ಹೊರಟಿರುವ ಕಾಂಗ್ರೇಸ್ ಸರ್ಕಾರ ಬಡಜನರ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿದೆ. ಕೂಡಲೇ ಸರ್ಕಾರ ತೈಲ ದರ ಏರಿಕೆಯನ್ನು ಹಿಂಪಡೆಯಬೇಕು. ಇಲ್ಲದ್ದಿದ್ದರೆ ಹೋರಾಟ ಅನಿವಾರ್ಯವೆಂದು ಸರ್ಕಾರವನ್ನು ಎಚ್ಚರಿಸಿದರು.
ಮಂಡಳಾಧ್ಯಕ್ಷ ಬಸವರಾಜ ಪರವಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಪ್ರತಿಭಟನೆಕಾರರು ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ನಿಮ್ಮ ಬೇಡಿಕೆ ಮನವಿಯನ್ನು ಸರ್ಕಾರಕ್ಕೆ ಕಳಿಸಲಾಗುವುದೆಂದರು
ಈ ವೇಳೆ ಬಿಜೆಪಿ ಮಹಿಳಾ ಅಧ್ಯಕ್ಷ ಸರಸ್ವತಿ ಹೈಬತ್ತಿ, ಉಮಾದೇವಿ ಬಿಕ್ಕಣ್ಣವರ, ಚನ್ನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಬಸನಗೌಡ ಸಿದ್ರಾಮನಿ, ಬಸವರಾಜ ಪುಟ್ಟಿ, ಕಿರಣ ಪಾಟೀಲ, ಸಂದೀಪ ದೇಶಪಾಂಡೆ, ಹಾಲಿ-ಮಾಜಿ ಪಪಂ,ಜಿಪಂ,ತಾಪಂ,ಗ್ರಾಪಂ ಸದಸ್ಯರು, ಕ್ಷೇತ್ರದ ಮುಖಂಡರು, ನೇಸರಗಿ-ಕಿತ್ತೂರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ವಿವಿಧ ಗ್ರಾಮಗಳ ಸಾರ್ವಜನಿಕರು ಇನ್ನಿತರರಿದ್ದರು.