ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಹುಬ್ಬಳ್ಳಿ,ಜೂ21: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ, ನಮ್ಮ ಕರ್ನಾಟಕ ಸೇವೆಯ ಪದಾಧಿಕಾರಿಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರಿ ಮಾತನಾಡಿ, ರಾಜ್ಯದಲ್ಲಿ ಕನ್ನಡಿಗರು ಪರಕೀಯರಂತೆ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಸಕಲ ಸವಲತ್ತುಗಳನ್ನು ಬಳಸಿಕೊಳ್ಳುವ ಉದ್ಯಮಿಗಳು ಸ್ಥಳೀಯರಿಗೆ ಕೆಲಸ ಕೊಡುವುದರಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ದೂರಿದರು.
ಕನ್ನಡಿಗರು ಕರ್ನಾಟಕದಲ್ಲಿ ಹುದ್ದೆಗಳಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಪರಿಹಾರವಾಗಬೇಕಿದ್ದ ಡಾ| ಸರೋಜಿನಿ ಮಹಿಷಿ ವರದಿ 1986ರಿಂದ ಇಂದಿನವರೆಗೂ ಜಾರಿಯಾಗದೇ ವರದಿ ಪುಟಗಳು ಧೂಳು ತಿನ್ನುತ್ತಿವೆ. 1986ರ ನಂತರ ಬಂದ ಸರಕಾರಗಳು ಮಹಿಷಿ ವರದಿ ಜಾರಿಗೊಳಿಸದೇ ನಿರ್ಲಕ್ಷ್ಯವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ| ಸರೋಜಿನಿ ಮಹಷಿ ವರದಿ ಜಾರಿಯಾದರೇ ಉದ್ಯಮಿಗಳಿಗೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ದೊರೆಯುತ್ತದೆ. ರೈತರ ಆತ್ಮಹತ್ಯೆ ಪ್ರಕರಣಗಳು ತಡೆಯಬಹುದಾಗಿದೆ. ರೈತ ಕುಟುಂಬಗಳು ಇಂದು ಬೀದಿಗಿಳಿದು ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದರೂ, ಸರಕಾರ ಗಮನ ಹರಿಸುತ್ತಿಲ್ಲ. ಕೂಡಲೇರೈತ ಕುಟುಂಬಗಳಿಗೆ ಷರತ್ತು ರಹಿತವಾಗಿ ಉದ್ಯೋಗ ನೀಡಲು ಸೂಚಿಸಬೇಕು. ಡಾ| ಮಹಿಷಿ ವರದಿ ಜಾರಿಗೊಳಿಸಿ ಶೇ. 70 ರಷ್ಟು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ, ಕೇಂದ್ರ ಸರಕಾರಗಳು ಕನ್ನಡಿಗರ ವಿಶೇಷ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು. ಕನ್ನಡಿಗರಿಗೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲಾಧ್ಯಕ್ಷ ಬಸವರಾಜ್ ದೇವರಮನಿ, ಜಿಲ್ಲಾ ಪ್ರಧಾನ ಸಂಚಾಲಕರಾದ ರಂಗನಾಥ ಕನಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಬಾಂಡಗೆ, ಜಿಲ್ಲಾ ಸಂಚಾಲಕರಾದ ಶೀತಲ ಮಲಗಾವಿ ಸೇರಿದಂತೆ ಮುಂತಾದವರು ಇದ್ದರು.