ಪಾಲಿಕೆ ಪೌರಕಾರ್ಮಿಕರ ಸಂಘದ ಪ್ರತಿಭಟನೆ
ಹುಬ್ಬಳ್ಳಿ,ಜೂ21: ಪೌರಕಾರ್ಮಿಕರಿಗೆ ನಿವೇಶನ ಇಲ್ಲವೇ ಮನೆಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹು-ಧಾ ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಗೃಹಭಾಗ್ಯ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ 320 ಮನೆಗಳು ಈವರೆಗೂ ಪೂರ್ತಿಯಾಗಿ ನಿರ್ಮಾಣವಾಗಿಲ್ಲ, ಸಾಕಷ್ಟು ಸಿವಿಲ್ ಕಾಮಗಾರಿಗಳು ಬಾಕಿಯಿದ್ದು, ಯೋಜನೆ ನೆನೆಗುದಿಗೆ ಬಿದ್ದಿವೆ. ನವನಗರದಲ್ಲಿ 122 ನಿವೇಶನಗಳನ್ನು ಪೌರಕಾರ್ಮಿಕರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಮನೆಕಟ್ಟಲು ಸಾಲಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಇದಲ್ಲದೇ 150 ಕ್ಕೂ ಹೆಚ್ಚು ಪೌರಕಾರ್ಮಿಕರು ಗೃಹ ಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ಅವರಿಗೆ ನಿವೇಶನ ಇಲ್ಲವೇ ಮನೆ ನೀಡಬೇಕು. ಪೌರಕಾರ್ಮಿಕರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಮಹಾನಗರ ಪಾಲಿಕೆಯ ನೌಕರರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರೇ ಅವರ ಕುಟುಂಬದ ಒಬ್ಬರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಹೊನ್ನೂರಪ್ಪ ದೇವಗಿರಿ, ಗಂಗಾಧರ ಟಗರಗುಂಟಿ, ನಿಂಗಪ್ಪ ಮೊರಬದ, ದುರಗಪ್ಪ ವಿರಾಪುರ ಸೇರಿದಂತೆ ಮುಂತಾದವರು ಇದ್ದರು.