ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಲಿಸಿ
ಬಾಗಲಕೋಟೆ,ಜೂ21 : ಸಫಾಯಿ ಕರ್ಮಚಾರಿಗಳಿಗೆ ನ್ಯಾಯಯುತವಾಗಿ ಸಿಗಬೇಕಾಗದ ಸರಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಕೆಲಸವಾಗಬೇಕೆಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಸಫಾಯಿ ಕರ್ಮಚಾರಿ ಮತ್ತು ಸಂಘಟನೆಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ. ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಸರಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸಾಮೂಹಿತ ಶೌಚಾಲಯದ ಸ್ಥಿತಿಗತಿಗಳ ಬಗ್ಗೆ ಪ್ರಶ್ನಿಸಿದ ಅವರು ಜಮಖಂಡಿ ಭಾಗದಲ್ಲಿ ಡಿ ಗ್ರೂಪ್ ನೌಕರರ ಉಪಯೋಗಿಸಿ ಸಾಮೂಹಿಕ ಶೌಚಾಲಯಗಳನ್ನು ಶುಚಿಗೊಳಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ ಜಟ್ಟಿಂಗ್ ಮಷೀನ್ ಉಪಯೋಗಿಸಲಾಗುವುದೆಂದು ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಸಭೆಗೆ ತಿಳಿಸಿದರು.
ನಗರಸಭೆಯಲ್ಲಿ ಖಾಯಂಗೊಂಡ ಕೆಲ ಸಿಬ್ಬಂದಿಗಳಿಗೆ ಮನೆ ಇಲ್ಲದ್ದನ್ನು ಗಮನಿಸಿದ ಅಧ್ಯಕ್ಷರು ಮುಂಬರುವ ದಿನಗಳಲ್ಲಿ ನಿವೇಶನ ರಹಿತ, ನಿವೇಶನ ಸಹಿತ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಆಯುಕ್ತರಿಗೆ ನಿವೇಶನ ಗುರುತಿಸಲು ಸೂಚಿಸಿದರು. ಪ್ರತಿ ಗ್ರಾಮ ಪಂಚಾಯತಿಯಲ್ಲಿ 5 ಜನ ಸಿಬ್ಬಂದಿಗಳಿರುವುದು ಸಾಮಾನ್ಯ ಜನಸಂಖ್ಯೆ ಹೆಚ್ಚಾಗಿರುವ ಗ್ರಾ.ಪಂಗಳಿಗೆ ಹೆಚ್ಚುವರಿಯಾಗಿ ಹೊರಗುತ್ತಿಗೆ ಆಧಾರ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲು ಹೇಳಿದರು. ಪ್ರತಿ ಕಾರ್ಮಿಕರ ಆರೋಗ್ಯಕ್ಕೆ ಹೆಚ್ಚಿನ ನಿಗಾ ಇಡುವದಲ್ಲದೇ ವಿಮಾ ಯೋಜನೆ, ಸುರಕ್ಷತಾ ಪರಿಕರಣಗಳನ್ನು ಒದಗಿಸಬೇಕು ಎಂದರು.
ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ ಶೌಚಾಲವುಳ್ಳ ವಿಶ್ರಾಂತಿ ಕೊಠಡಿ ಒದಗಿಸಬೇಕು. ನಿಯಮಿತವಾಗಿ ಮಾಸಿಕ ವೇತನ ಆಗದಿರುವ ಬಗ್ಗೆ ತಿಳಿದು ಅಲ್ಲಿನ ಅಧಿಕಾರಿಗಳಿಗೆ ಅನುದಾನ ಪಡೆದುಕೊಂಡು ವೇತನ ಪಾವತಿಗೆ ಕ್ರಮವಹಿಸಲು ತಿಳಿಸಿದರು. ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂಸಂ.01124648924ಗೆ ಕರೆ ಮಾಡಿ ತಿಳಿಸಬಹುದು ಇಲ್ಲವೇ ಆಯೋಗದ ವೆಬ್‍ಸೈಟ್ ಮೂಲಕ ದೂರು ದಾಖಲಿಸಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕ ಮಾಹಿತಿಯನ್ನು ಸಭೆಗೆ ತಿಳಿಸಿದರೆ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಾಹಿತಿಯನ್ನು ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ನಿರ್ದೇಶಕ ಜಗದೀಶ ಹಿರೇಮನಿ, ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸಿಂಗ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.