ವರ್ಷಕಳೆದರೂ ಪೂರ್ಣಗೊಳ್ಳದ ಮೂತ್ರಾಲಯ ಕಾಮಗಾರಿ
ಗುಳೇದಗುಡ್ಡ,ಜೂ.21: ಪುರಸಭೆಯಿಂದ ನಿರ್ಮಿಸುತ್ತಿರುವ ಒಂದು ಮೂತ್ರಾಲಯ ಕಳೆದು ಒಂದು ವರ್ಷಕಳೆದರೂ ಪೂರ್ಣಗೊಳ್ಳುವ ಮುಹೂರ್ತವೇ ಬಂದಿಲ್ಲ. ಕೇವಲ ಒಂದು ಮೂತ್ರಾಲಯವನ್ನು ನಿರ್ಮಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರೂ ಪೂರ್ಣವಾಗಿಲ್ಲ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ.
ಇಲ್ಲಿನ ಡಿವಿಜನ್ ನಂ 23ರಲ್ಲಿನ ಗ್ರಾಮದೇವತೆ ಮೂಕೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿದ್ದ ಹಳೆಯ ಮೂತ್ರಾಲಯವನ್ನು ತೆರವುಗೊಳಿಸಿ, 2022ರ ನಗರೋತ್ಥಾನದ ನಾಲ್ಕನೇ ಹಂತದ ಯೋಜನೆಯ ಅಡಿಯಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ಮಹಿಳೆಯರು ಹಾಗೂ ಪುರಷರಿಗಾಗಿ ನಿರ್ಮಿಸುತ್ತಿರುವ ಈ ಮೂತ್ರಾಲಯ ಇನ್ನೂ ಪೂರ್ಣಗೊಂಡಿಲ್ಲ. ಇತ್ತ ಇದ್ದ ಹಳೆಯ ಮೂತ್ರಾಲಯವನ್ನು ತೆರವುಗೊಳಿಸಿದ್ದು ಸಾರ್ವಜನಿಕರಿಗೆ ಮೂತ್ರಾಲಯವೇ ಇಲ್ಲದಂತೆ ಮಾಡಿದ್ದಾರೆ. ಈ ಭಾಗದ ಸಾರ್ವಜನಿಕರಿಗೆ ಇಲ್ಲಿ ಯಾವುದೇ ಮೂತ್ರಾಲಯ ಇಲ್ಲದಂತಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ.