ಆರೋಗ್ಯಯುತ ಮನಸ್ಸಿಗಾಗಿ ಯೋಗ ಅವಶ್ಯ
ಶಿರಹಟ್ಟಿ,ಜೂ.21: ಯೋಗವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಮನಸ್ಸಿಗೆ ಚೈತನ್ಯ ನೀಡುತ್ತದೆ, ಏಕಾಗ್ರತೆ ಸೃಷ್ಠಿಸುವ ಶಕ್ತಿ ಯೋಗಕ್ಕಿದೆ, ಮನಸ್ಸನ್ನು ಚುರುಕುಗೊಳಿಸಿ ನಮ್ಮ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಉತ್ತಮ ಜೀವನ ಮತ್ತು ಆರೋಗ್ಯಕ್ಕೆ ಯೋಗ ಅತ್ಯಂತ ಸಹಕಾರಿ ಎಂದು ರಹಶೀಲ್ದಾರ ಅನೀಲ ಬಡಿಗೇರ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಜನರು ಒತ್ತಡದ ಬದುಕಿನ ಜಂಜಾಟದಿಂದ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿತ್ಯ ಒಂದು ಘಂಟೆ ಯೋಗ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರವಾಗುತ್ತವೆ. ವೈದ್ಯರಿಂದ ವಾಸಿಯಾಗದ ಹಲವಾರು ಖಾಯಿಲೆಗಳು ಯೋಗದಿಂದ ಗುಣವಾಗುತ್ತವೆ. ಯೋಗದಲ್ಲಿ ನೂರಾರು ಭಂಗಿಗಳಿದ್ದು, ಅದರಲ್ಲಿ ಒಂದೊಂದು ಭಂಗಿಯು ಕೊಡಾ ಒಂದೊಂದು ಖಾಯಿಲೆ ವಾಸಿ ಮಾಡುವಂತಹ ಶಕ್ತಿ ಹೊಂದಿದೆ. ಮತ್ತು ಮುಂಜಾನೆ ನಿಸರ್ಗದ ಮಡಿಲಲ್ಲಿ ಯೋಗ ಮಾಡುವುದರಿಂದ ಒಳ್ಳೆಯ ಆಮ್ಲಜನಕ ಸಿಗುತ್ತದೆ. ಇದರಿಂದ ಸದೃಢ ಆರೋಗ್ಯ ವೃದ್ಧಿಯಾಗಿ ರೋಗ ಮುಕ್ತ ಸಮಾಜ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಚೈತನ್ಯದಿಂದ ಮಾಡಲು ಯೋಗವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಫಕ್ಕೀರೇಶ ರಟ್ಟಿಹಳ್ಳಿ,ಪ್ರಾಚಾರ್ಯ ಮಾಂತೇಶ ಬಜೇಂತ್ರಿ, ಕೆ.ಎ. ಬಳಿಗಾರ, ಶಿಕ್ಷಕ ವೀರಣ್ಣ ಪೋಲೀಸ್‍ಪಾಟೀಲ್,ಎಂ.ಕೆ. ಲಮಾಣಿ, ಎಮ್.ಎ. ಮಕಾನದಾರ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.