ಜಲಾನಯನ ಪ್ರದೇಶಾಭಿವೃದ್ದಿಗೆ ಒತ್ತು ನೀಡಲು ಸೂಚನೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಜೂ.20; ಹವಾಮಾನ ವೈಪರಿತ್ಯದಿಂದ ತಾಪಮಾನ ಹೆಚ್ಚಾಗುವ ಜೊತೆಗೆ ಬರಸ್ಥಿತಿಯನ್ನು ಎದುರಿಸುವಂತಾಗಲು ಮುಂದಾಲೋಚನೆಯಿಂದ ಮರಗಿಡ ಬೆಳೆಸಿ ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು. ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಸದಸ್ಯರು ಹಾಗೂ ರೈತ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಧಿಕಾರಿಗಳೊಂದಿಗೆ ನೆಲ, ಜಲ, ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಲಾದ ಸಭೆಯಲ್ಲಿ ಇಲಾಖಾವಾರು ಜಲಸಂರಕ್ಷಣಾ, ಅರಣ್ಯೀಕರಣ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದರು.ಕಳೆದ ವರ್ಷದ ಭೀಕರ ಬರಗಾಲದಿಂದ ಸಾಕಷ್ಟು ಪಾಠವನ್ನು ಕಲಿಯಲಾಗಿದ್ದು ಜಲ ಸಂರಕ್ಷಣೆ, ಅರಣ್ಯೀಕರಣಕ್ಕೆ ಮುಂದಾಗಬೇಕಾಗಿದೆ. ಎಲ್ಲೆಲ್ಲಿ ಜಲಸಂರಕ್ಷಣಾ ಕೆಲಸವಾಗಿದೆ, ಅಂತಹ ಪ್ರದೇಶದಲ್ಲಿ ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿರುವುದಿಲ್ಲ. ಮತ್ತು ಎಲ್ಲೆಲ್ಲಿ ಅರಣ್ಯೀಕರಣ ಹೆಚ್ಚಿದೆ ಅಂತಹ ಕಡೆಯು ತಾಪಮಾನ ನಿಯಂತ್ರಣವಾಗಿರುವುದನ್ನು ಕಾಣಲಾಗಿದೆ. ಈ ಹಿನ್ನಲೆಯಲ್ಲಿ ನೀರು,  ನೆಲ, ಪರಿಸರ, ಹವಾಮಾನ ಸಂರಕ್ಷಣೆಗಾಗಿ ಎಲ್ಲಾ ಇಲಾಖೆಗಳು ಭವಿಷ್ಯದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕಾಗಿದೆ ಎಂದರು.