ಕಾಡಂಚಿನ ಗ್ರಾಮ ಹೊನ್ನೇಗೌಡನಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಒತ್ತಾಯ
ಸಂಜೆವಾಣಿ ವಾರ್ತೆ
ಚಾಮರಾಜನಗರ: ಜೂ.21:- ತಾಲೂಕಿನ ಪುಣಜನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ತಮಿಳುನಾಡು ಗುಮಠಾಪುರಕ್ಕೆ ಹೊಂದಿಕೊಂಡಿರುವ ಕಂದಾಯ ಗ್ರಾಮದಲ್ಲಿ 14 ವಾಸದ ಮನೆಗಳು ಇದ್ದು ರೈತರು 18 ಕೊಳವೆ ಭಾವಿಗಳನ್ನು ಹೊಂದಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ರೈತರು ಇಂದು ಸೆಸ್ಕ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಚಾಮುಂಡೇಶ್ವರೀ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿಯಲ್ಲಿ ಇಂದು ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ಹೊನ್ನೇಗೌಡನ ಹಳ್ಳಿಯು (ಕೈಲಾಸ ಭೂಮಿ) 1835ರಿಂದ ಜಾರಿಯಲ್ಲಿದ್ದು ಸುಮಾರು 300 ಎಕರೆ ಉಳುಮೆ ಪ್ರದೇಶವನ್ನು ಹೊಂದಿದೆ, ಕೆಲವು ರೈತರು ಸ್ವಂತ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದಾರೆ, 6ಜನ ರೈತರು ಮಾತ್ರ ಸೋಲಾರ್ ಸಹಾಯದಿಂದ ವ್ಯವಸಾಯ ಮಾಡುತ್ತಿದ್ದಾರೆ, ವಿದ್ಯುತ್ ಇಲ್ಲದ ಪರಿಣಾಮ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಫಸಲು ಹಾನಿಯಾಗುತ್ತಿದೆ, ಇದರಿಂದ ರೈತರು ಜೀವನ ನಡೆಸಲು ಸಾಧ್ಯವಾಗಿತ್ತಿಲ್ಲ, ಹೀಗಾಗಿ ಅರಣ್ಯ ಇಲಾಖೆಯ ಸಹಕಾರ ಪಡೆದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ವಿಭಾಗದ ಲೆಕ್ಕಾಧಿಕಾರಿ ಭಾಸ್ಕರ್ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ಪುಟ್ಟರಾಜು ಎಂಬುವರು ಮಾತನಾಡಿ ಹರದನಹಳ್ಳಿ ಉಪ ವಿಭಾಗಕ್ಕೆ ಹೆಚ್ಚುವರಿ ಲೈನ್‍ಮೆನ್‍ಗಳ ಅವಶ್ಯಕತೆ ಇದ್ದು ನೇಮಕ ಮಾಡಿಕೊಡುವಂತೆ ತಿಳಿಸಿದರು.
ಸಭೆಯಲ್ಲಿ ಸಹಾಯಕ ಕಾರ್ಯನಿವಾಹಕ ಇಂಜನೀಯರ್ ದೃಪದ್, ಕಂದಾಯ ಅಧಿಕಾರಿ ಮಹದೇವಸ್ವಾಮಿ, ಸಹಾಯಕ ಇಂಜನೀಯರ್‍ಗಳಾದ ವಸಂತ್ ಕುಮಾರ್, ನವೀನ್, ರೀತೇಶ್ ಸೇರಿದಂತೆ ಗ್ರಾಹಕರು ಇದ್ದರು.