ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.21:- ರಾಜ್ಯ ಸರ್ಕಾರದ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿಯ ಸಾವಿರಾರು ಮಂದಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಈಗಾಗಲೇ ಜನಸಾಮಾನ್ಯರು ಉಪಯೋಗಿಸುವ ಹಾಲು, ವಿದ್ಯುತ್, ಸ್ಟಾ?ಯಂಪ್ ಡ್ಯೂಟಿ, ವಾಹನ ನೋಂದಣಿ ಸೇರಿದಂತೆ ರೈತರು ಉಪಯೋಗಿಸುವ ಬಿತ್ತನೆ ಬೀಜ, ಪಹಣಿ ಪತ್ರ, ಆಸ್ತಿಗಳ ನೊಂದಣಿಯ ಶುಲ್ಕ, ಎಂಜಿನಿಯರಿಂಗ್ ಶುಲ್ಕ, ವಾಹನಗಳ ಮೇಲೆ ತೆರಿಗೆ ಸೇರಿದಂತೆ ಹತ್ತಾರು ಬೆಲೆ ಏರಿಕೆ ಮಾಡಿ ಬೆಲೆ ಏರಿಕೆಯ ಸರ್ಕಾರ ದಿವಾಳಿಯಾಗಿದೆ ಎಂದು ನಿರೂಪಿಸುತ್ತಿದೆ. ಸರ್ಕಾರ ಕೂಡಲೇ ತನ್ನ ಬೆಲೆ ಏರಿಕೆ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಉಚಿತ ಭಾಗ್ಯಗಳನ್ನು ನೀಡಿ ಮತ್ತೊಂದು ಕೈಯಿಂದ ಎರಡು ಪಟ್ಟು ಹಣ ತೆರಿಗೆ ಮೂಲಕ ಕಿತ್ತುಕೊಳ್ಳಲಾಗುತ್ತಿದೆ. ಈಗ ಇದೆಲ್ಲ ಜನ ಸಾಮಾನ್ಯರ ಅನುಭವಕ್ಕೆ ಬಂದಿದೆ. ಜನರೇ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುವ ದಿನಗಳು ದೂರಿವಿಲ್ಲ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸರ್ಕಾರ ಬೆಲೆ ಏರಿಕೆಯಲ್ಲಿ ತೊಡಗಿದರೆ ಸಚಿವರು ಗಾಢ ನಿದ್ರೆಯಲ್ಲಿದ್ದಾರೆ, ಹಗರಣದಲ್ಲಿ ತೊಡಗಿದ್ದಾರೆ. ಇದಕ್ಕೆ ಸಚಿವರು ರಾಜೀನಾಮೆ ನೀಡಿರುವುದು ಜತೆಗೆ ಮತ್ತೊಬ್ಬ ಸಚಿವರ ಹೆಸರು ಕೇಳಿ ಬಂದಿರುವುದೇ ಸಾಕ್ಷಿ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೆಟ್ರೋಲï, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಕಳೆದ ಹನ್ನೆರಡು ತಿಂಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. 9 ತಿಂಗಳಿಂದ ಒಂದೊಂದು ವಸ್ತುಗಳ ಬೆಲೆ ಜಾಸ್ತಿ ಮಾಡಲಾಗಿದೆ. ಹಾಲಿನ ದರ, ಆಸ್ತಿ ತೆರಿಗೆ ಹೆಚ್ಚು ಮಾಡಲಾಗಿದೆ. ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾದ ಹಣವನ್ನು ದುರ್ಬಳಕೆ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದ್ದು, ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ, ಬಸ್ ದರ ಹೆಚ್ಚಿಸಲಾಗಿದೆ ಎಂದು ಆಕ್ರೊಶ ವ್ಯಕ್ತಪಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್‍ಗಳಾದ ಸಂದೇಶ್ ಸ್ವಾಮಿ, ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತಕುಮಾರ್‍ಗೌಡ, ಮಿರ್ಲೆ ಶ್ರೀನಿವಾಸಗೌಡ, ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಕೆ.ಶಂಕರ್, ಆರ್.ರವೀಂದ್ರ, ಬಿ.ವಿ.ಮಂಜುನಾಥ್, ಜೆ.ಎಸ್.ಜಗದೀಶ್, ಪ್ರಶಾಂತ್‍ಗೌಡ, ವೇದಾವತಿ, ಪ್ರಮೀಳಾ ಭರತ್, ಡಾ.ಎಂ.ರೂಪಾ, ಛಾಯಾದೇವಿ, ಲೋಲಾಕ್ಷಿ ನಾರಾಯಣಪ್ಪ, ಮಾಜಿ ಉಪ ಮಹಾಪೌರ ವಿ.ಶೈಲೇಂದ್ರ, ಮುಖಂಡರಾದ ಮಂಗಳಾ ಸೋಮಶೇಖರ್, ಎಚ್.ಜಿ.ಗಿರಿಧರ್, ಬಿ.ಎಂ.ರಘು, ಮಹೇಶ್ ಮಡವಾಡಿ, ಕೇಬಲ್ ಮಹೇಶ್, ಜೋಗಿ ಮಂಜು, ಪಡುವಾರಹಳ್ಳಿ ರಾಮಕೃಷ್ಣ ಸೇರಿದಂತೆ ಅನೇಕರು ಇದ್ದರು.