ಕಂದಾಯ ಇಲಾಖೆ ಸಮಸ್ಯೆಗಳೇ ಸದ್ದು
ಸಂಜೆವಾಣಿ ನ್ಯೂಸ್
ಮೈಸೂರು: ಜೂ.21:- ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಡೆದ ಮೈಸೂರು ತಾಲ್ಲೂಕು ಮಟ್ಟದ ಜನಸ್ಪಂದನಾ ಸಭೆಗೆ ಒಟ್ಟು ಬರೋಬ್ಬರಿ 108 ಮನವಿಗಳು ಬಂದಿದ್ದು, ಈ ಪೈಕಿ ಕಂದಾಯ ಇಲಾಖೆಗೆ ಸೇರಿದ 62 ಸಮಸ್ಯೆಗಳೇ ಹೆಚ್ಚಾಗಿ ಸದ್ದು ಮಾಡಿದವು.
ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ತನ್ವೀರ್ ಸೇಠ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 108 ಸಮಸ್ಯೆಗಳು ಕಂಡು ಬಂದವು. ಈ ಪೈಕಿ ಪಿಂಚಣಿ ಬರುತ್ತಿಲ್ಲ, ಖಾತೆ ಬದಲಾವಣೆ, ಪೌತಿಖಾತೆ ಸೇರಿ ಕಂದಾಯ ಇಲಾಖೆಯ 62, ನಗರಾಭಿವೃದ್ಧಿ ಇಲಾಖೆಯ 21, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 15, ಗೃಹ ಇಲಾಖೆ ಮತ್ತು ಆPಂಖ(ಆಡಳಿತ ಸುಧಾರಣೆಗಳು) ಇಲಾಖೆ ತಲಾ 2 ಸಮಸ್ಯೆ ಸೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಮಸ್ಯೆಗಳು ಸದ್ದು ಮಾಡಿದವು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ವಿಧವೆಯರು, ವೃದ್ಧರು ಹಾಗೂ ವಿಶೇಷಚೇತನರಿಗೆ ಸಂಬಂಧಿಸಿದ ಪಿಂಚಣಿ ದೊರೆಯುವಂತೆ ಸಂಬಂಧ ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯ ಸ್ವಚ್ಛತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತುರ್ತಾಗಿ ಕ್ರಮವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಯೋಜನೆಯನ್ನು ನೀಡುವುದಕ್ಕೂ ಮೊದಲು ಅಗತ್ಯ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ದೊರಕುವಂತೆ ಮಾಡಬೇಕು ಎಂದು ತಿಳಿಸಿದರು.
ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಮೈಸೂರು ಅಭಿವೃದ್ಧಿಯ ಕಾರ್ಯಗಳಿಂದ ರಾಜ್ಯಕ್ಕೆ ಮಾದರಿಯಾಗಬೇಕು. ಯಾವುದೇ ಸಮಸ್ಯೆಯಾದರೂ ಸಹ ದೀರ್ಘಾವಧಿಯವರೆಗೆ ಮುಂದುವರೆಯದಂತೆ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಈ ವಿಷಯವಾಗಿ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಇರುತ್ತದೆ ಎಂದರು.
ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದರೆ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬ ಅಧಿಕಾರಿಯು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಇಲ್ಲವಾದರೆ ಮುಂದಿನ ಪರಿಣಾಮಕ್ಕೆ ಸ್ವತಃ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ವಾರದ ಗಡುವು: ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, 108 ಅರ್ಜಿಗಳನ್ನು ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಖುದ್ದು ಸ್ವೀಕರಿಸಿ, ಒಂದು ವಾರದ ಒಳಗೆ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಬೇಕು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವು ಸ್ಮಶಾನಗಳನ್ನು ಕೆರೆಗಳಾಗಿ ಮಾರ್ಪಾಡು ಮಾಡಲಾಗಿದ್ದು, ಅಂತಹ ಸ್ಮಶಾಣಗಳಿಗೆ ಪರ್ಯಾಯ ಸ್ಥಳವನ್ನು ನಿಗದಿ ಮಾಡಿ ಕೆರೆಯನ್ನು ರಕ್ಷಿಸುವ ಕೆಲಸ ಆಗಬೇಕು. ಯಾವುದೇ ಸರ್ಕಾರಿ ಕಟ್ಟಡಗಳನ್ನು ಕೆಡವಲು ಮಾಡುವ ಮೊದಲು ಕಟ್ಟಡದ ಕುಂದು ಕೊರತೆಯನ್ನು ತಿಳಿಸಿ ತಾಂತ್ರಿಕ ಇಲಾಖೆಯಿಂದ ಅನುಮತಿಯನ್ನು ಪಡೆದು ನಂತರದಲ್ಲಿ ಕೆಡವಲು ಮುಂದಾಗಬೇಕು ಎಂದು ಸೂಚಿಸಿದರು.
ಧಾರಾಕಾರ ಮಳೆಯಿಂದ ಹಾನಿಯಾಗಿ ನಷ್ಟ ಅನುಭವಿಸಿದ್ದ ಸಾರ್ವಜನಿಕರಿಗೆ ಈಗಾಗಲೇ ಸಹಾಯಧನವನ್ನು ತಲುಪಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸಹಾಯಧನ ಅರ್ಹ ಸಾರ್ವಜನಿಕರಿಗೆ ತಲುಪಲಿದೆ ಎಂದರು.
ಶಾಸಕ ಜಿ.ಟಿ ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ. ವಿವೇಕಾನಂದ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.