ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹನೂರು ಜೂ 21:- ವಾಲ್ಮೀಕಿ ಅಭಿವೃದ್ಧಿ ನಿಗಮದ ಮೀಸಲು ಹಣಕಾಸಿನ ಹಗರಣದ ಬಗ್ಗೆ ಹೊಣೆ ಹೊತ್ತು ಹಣಕಾಸಿನ ಸಚಿವರಾದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ರಾಮಪುರ ಮಹದೇಶ್ವರ ಬಿಜೆಪಿ ಮಂಡಲ ಅಧ್ಯಕ್ಷ ಚಂಗವಾಡಿ ರಾಜು ಆಗ್ರಹಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ಗೆ ಮನವಿ ಪತ್ರವನ್ನು ಸಲ್ಲಿಸಿದ ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡುತ್ತಿದ್ದು ರೈತರಿಗೆ ಬೇಕಾದ ಬಿತ್ತನೆ ಬೀಜಗಳು ಮತ್ತು ಕೃಷಿ ಪರಿಕರಗಳ ಬೆಲೆಗಳನ್ನು ಸಹ ಏರಿಕೆ ಮಾಡಲಾಗುತ್ತಿದೆ.
ಮುಂದ್ರಾಂಕ ಶುಲ್ಕವನ್ನು ಸಹ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿ ದುಬಾರಿಗೊಳಿಸಲಾಗಿದ್ದು ಜನಸಾಮಾನ್ಯರ ಜೀವನ ಕಷ್ಟಕರವಾಗಿದೆ. ಇತ್ತೀಚೆಗಷ್ಟೇ ತೈಲ (ಡೀಸೆಲ್ ಮತ್ತು ಪೆಟ್ರೋಲ್) ಬೆಲೆಯನ್ನು ಸಹ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಸರಕು ಸಾಗಣೆ ಮಾಡಲು, ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡಲು, ತುರ್ತು ಸೇವೆಯನ್ನು ಒದಗಿಸಲು ಕಷ್ಟವಾಗಿದೆ.
ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಬೃಹತ್ ಪ್ರಮಾಣದ ನೂರಾರು ಕೋಟಿ ಹಣವನ್ನು ಇತರೆ ಅನ್ಯ ವ್ಯಕ್ತಿಗಳ ಖಾತೆಗಳಿಗೆ ಜಮೆ ಮಾಡಿರುವುದು ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರ ಪರಿಣಾಮವಾಗಿ ಈಗಾಗಲೇ ಮಂತ್ರಿಮಂಡಲದ ಸಚಿವರೊಬ್ಬರ ತಲೆದಂಡವಾಗಿದ್ದು ಈ ಎಲ್ಲಾ ಅವ್ಯವಹಾರಗಳಿಗೂ ಮೂಲ ಕಾರಣ ಹಣಕಾಸು ಸಚಿವರು ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ನೇರಹೊಣೆಯಾಗಿರುತ್ತಾರೆ.
ಆದ್ದರಿಂದ ಮಾನ್ಯ ಘನತೆವೆತ್ತ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ವಜಾಗೊಳಿಸಿ ತನಿಖೆಗೆ ಆದೇಶಿಸಬೇಕೆಂದು ಹಾಗೂ ಬೆಲೆ ಏರಿಕೆಯನ್ನು ತಗ್ಗಿಸಲು ಇಲಾಖೆಗಳಿಗೆ ಸೂಚಿಸಬೇಕೆಂದು ಭಾರತೀಯ ಜನತಾ ಪಾರ್ಟಿ, ಹನೂರು ವಿಧಾನಸಭಾ ಕ್ಷೇತ್ರದಿಂದ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಶಾಗ್ಯ ಕೆಂಪಣ್ಣ ಮಾತನಾಡಿ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕೊಟ್ಟಂತಾಗಿದೆ. ಇದರಿಂದ ಎಷ್ಟೋ ಜನ ಮಹಿಳೆಯರು ಒಡವೆ ಹಣಕಾಸು ಮೊಬೈಲ್ ಗಳನ್ನು ಸಹ ಕಳೆದುಕೊಂಡಿದ್ದಾರೆ. ಬಸ್ಸಿನಲ್ಲಿ ಒಬ್ಬರಿಗೊಬ್ಬರು ಗಲಾಟೆ ಮಾಡಿರುವ ಘಟನೆಗಳು ಕೂಡ ಜರುಗಿದೆ.
ಅಭಿವೃದ್ಧಿ ಕೆಲಸ ಕಾರ್ಯಗಳ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು. ಯಾವುದೇ ಕೆಲಸ ಕಾರ್ಯ ಅಭಿವೃದ್ಧಿಗಳು ನಡೆಯುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿಲ್ಲ ಅಲ್ಲಿನ ಶಾಸಕರುಗಳೇ ಮಾತನಾಡಿಕೊಳ್ಳುತ್ತಿದ್ದಾರೆ ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಂದು ನಿಲ್ಲಿಸಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹನೂರು ಬಿಜೆಪಿ ಮಂಡಲ ಅಧ್ಯಕ್ಷ ವೃಷಬೇಂದ್ರ ಸ್ವಾಮಿ, ಕುರುಬರು ದೊಡ್ಡಿ ಚಾಂದ್ ಪಾಷಾ, ಹನೂರು ಪುಟ್ಟರಾಜು, ಬಸವರಾಜು, ಶಾಗ್ಯ ಕೆಂಪಣ್ಣ, ಜಗನ್ನಾಥ್ ನಾಯ್ಡು, ಬಂಡಳ್ಳಿ ಮಾದೇವ, ನಂಜುಂಡಸ್ವಾಮಿ, ಶಿವಮೂರ್ತಿ, ಮೀನಾ, ಮಧುವನಹಳ್ಳಿ ಕೃಷ್ಣ, ವರಪ್ರಸಾದ್ ಸೇರಿದಂತೆ ಇನ್ನಿತರರು ಇದ್ದರು.