ಸಹಕಾರಿ ಸಂಸ್ಥೆಗಳು ನಿರಂತರ ಸಂಪರ್ಕದಲ್ಲಿರುತ್ತವೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.21: ರೈತರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿರಂತರ ಸಂಪರ್ಕದಲ್ಲಿರುವ ಸಂಸ್ಥೆಗಳೇ ಸಹಕಾರಿ ಸಂಸ್ಥೆಗಳು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉಧ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಸ್ಥೆಗಳು ರೈತರ ಜೀವನಾಡಿಗಳಾಗಿ ಕೆಲಸ ನಿರ್ವಹಿಸುತ್ತಿವೆ. ಸಹಕಾರಿ ತತ್ವದ ಅಡಿಯಲ್ಲಿ ನಡೆಯುವ ಸಹಕಾರ ಸಂಸ್ಥೆಗಳು ಸರ್ವಜನರ ಆಶೋತ್ತರಗಳನ್ನು ಈಡೇರಿಸುತ್ತಾ ಪ್ರಗತಿಯತ್ತ ಸಾಗುತ್ತವೆ. ಸರ್ಕಾರದ ನೆರವು ಪಡೆದು ಅದರಲ್ಲಿನ ಲಾಭಾಂಶವನ್ನು ಸರ್ವ ಸದಸ್ಯರಿಗೆ ನೀಡುವ ಮೂಲಕ ಸಹಕಾರಿ ಸಂಸ್ಥೆಗಳು ರೈತರ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಸಾಮಾನ್ಯವಾಗಿ ಬಹುತೇಕ ಎಲ್ಲಾ ದೊಡ್ಡದೊಡ್ಡ ಗ್ರಾಮಗಳಲ್ಲಿ ವಿವಿಧ ರೀತಿಯ ಸಹಕಾರಿ ಸಂಸ್ಥೆಗಳು, ಪತ್ತಿನ ಸಹಕಾರಿ ಸಂಘಗಳು ಇರುತ್ತವೆ. ಇವುಗಳಲ್ಲಿ ರೈತರು ಸದಸ್ಯರಾಗುವ ಮೂಲಕ ಸಂಘದ ಏಳೀಗೆಗೆ ಶ್ರಮಿಸುತ್ತಾರೆ. ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಮಂಡಳಿ ರಚನೆ ಮಾಡಿ ಸಂಘ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದ್ದರಿಂದ ಸಹಕಾರಿ ತತ್ವದಲ್ಲಿ ರಚನೆಯಾಗುವ ಈ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೇ ಸ್ವತಂತ್ರವಾಗಿ ನಡೆದುಕೊಂಡು ಹೋಗಲು ಎಲ್ಲರೂ ಶ್ರಮಿಸಬೇಕು. ಗ್ರಾಮದ ಸರ್ವ ಸದಸ್ಯರ ಹಿತವನ್ನು ಬಯಸುವ ಇಂಥಹ ಸಂಘಗಳು ರೈತರಿಗೆ ವರದಾನವಾಗಿ ಕೆಲಸ ಮಾಡುತ್ತವೆ. ನಿಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಅಭಿವೃದ್ದಿಯ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಇದಕ್ಕೆ ಗ್ರಾಮದ ಮುಖಂಡರ, ನಿರ್ದೇಶಕರ, ಸರ್ವಸದಸ್ಯರ ಸಹಕಾರ, ಶ್ರಮ ಅಡಗಿದೆ ಎಂದರು.ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ ಸೇರಿದಂತೆ ಹಲವರಿದ್ದರು.