ಜಿಲ್ಲೆಯಲ್ಲಿ ವಿನೂತನ ಸಾರ್ಥಕ ಕಾರ್ಯಕ್ರಮ ಯಶಸ್ವಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂನ್.20:- ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ರಾಜ್ಯದಲ್ಲಿಯೇ ಮೊದಲು ಎನಿಸಿರುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ಯಶಸ್ಸು ಕಂಡಿದೆ.
ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿ ಮೈಸೂರಿನ ಇನ್‍ಫೋಸಿಸ್ ರೋಟರಿ ಪಂಚಶೀಲ ಸಂಸ್ಥೆಗಳೊಂದಿಗೆ ಸಿಎಸ್‍ಆರ್ ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿಗೆ ಈ ಹಿಂದೆಯೇ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಲನೆ ನೀಡಿದ್ದರು.
ಕಾರಾಗೃಹದಲ್ಲಿನ ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳೊಂದಿಗೆ ತರಬೇತಿ ಆರಂಭವಾಗಿತ್ತು. ತರಬೇತಿಗಾಗಿ 38 ವಿಚಾರಣಾಧೀನ ಬಂಧಿಗಳು ನೊಂದಣಿಯಾಗಿದ್ದರು. ಇವರಲ್ಲಿ 7 ಬಂಧಿಗಳು ಕಾರಾಗೃಹದಲ್ಲಿಯೇ ಕಂಪ್ಯೂಟರ್‍ನ ವಿವಿಧ ಕೋರ್ಸುಗಳನ್ನು ಕಲಿತು ಯಶಸ್ವಿಯಾಗಿ ಪೂರ್ಣಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ಇಂದು ಪ್ರತಿಷ್ಠಿತ ಇನ್‍ಫೋಸಿಸ್ ಸಂಸ್ಥೆಯ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಈ ಮೂಲಕ ಚಾಮರಾಜನಗರ ಜಿಲ್ಲೆ ಸಾರ್ಥಕತೆ ಕಾರ್ಯ ಕೈಗೊಂಡು ರಾಜ್ಯದಲ್ಲೇ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾರಾಗೃಹ ಕಟ್ಟಡದಲ್ಲಿಯೇ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಇನ್‍ಫೋಸಿಸ್ ಸಹಕಾರದೊಂದಿಗೆ ಐಐಎಚ್‍ಟಿ ಟೆಕಾಡಮಿ ಬೋಧಕರನ್ನ ನಿಯೋಜಿಸಲಾಗಿದೆ. ಬಂಧಿಗಳಿಗೆ ಮೈಕ್ರೋಸಾಫ್ಟ್ ಆಫೀಸ್, ಕಂಪ್ಯೂಟರ್ ಫಂಡಮೆಂಟಲ್, ಸಾಫ್ಟ್ ಸ್ಕಿಲ್ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಮೊದಲನೇ ತಂಡದಲ್ಲಿ 38 ಬಂಧಿಗಳು ಕಂಪ್ಯೂಟರ್ ಕೋರ್ಸುಗಳನ್ನು ಕಲಿಯಲು ಆರಂಭಿಸಿದರು. ಇವರಲ್ಲಿ ಯಶಸ್ವಿಯಾಗಿ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ 7 ಮಂದಿಗೆ ಇನ್‍ಫೋಸಿಸ್ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಯವರು ವಿತರಿಸಿದ್ದಾರೆ. 13 ಬಂಧಿಗಳು ಸಕ್ರಿಯವಾಗಿ ಕೋರ್ಸುಗಳಲ್ಲಿ ಪಾಲ್ಗೊಂಡು ವಿಶೇಷ ಗಮನಸೆಳೆದಿದ್ದು, ಇವರ ಕಲಿಕೆ ಮುಂದುವರೆದಿದೆ. ಆಸಕ್ತ ಎಲ್ಲ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ಕಾರ್ಯ ಕಾರಾಗೃಹದಲ್ಲಿ ಮುಂದುವರೆಸಲಾಗಿದ್ದು ನಿರಂತರವಾಗಿ ನಡೆಯಲಿದೆ.
ಕಂಪ್ಯೂಟರ್ ಕೋರ್ಸು ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡುವ ಸರಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ದೇಶ ಕಟ್ಟುವ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ಪಾತ್ರ ಅಮೂಲ್ಯವಾಗಿದೆ. ವಿಚಾರಣಾಧೀನ ಬಂಧಿಗಳು ಅವರು ಬಿಡುಗಡೆಗೊಂಡ ಬಳಿಕ ಬದುಕು ಹಸನಾಗಿಸಿಕೊಳ್ಳಲು ಅವರ ಭವಿಷ್ಯದ ಹಿತದೃಷ್ಠಿಯಿಂದ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲೆಂಬ ಸದುದ್ದೇಶದಿಂದ ಕಂಪ್ಯೂಟರ್ ತರಬೇತಿ ಆರಂಭಿಸಲಾಯಿತು. ಇಂದು ನಮ್ಮ ಆಶಯ ಉದ್ದೇಶ ಫಲಪ್ರದವಾಗಿದೆ. ಈ ಮಹತ್ಕಾರ್ಯಕ್ಕೆ ಇನ್‍ಫೋಸಿಸ್, ಐಐಎಚ್‍ಟಿ ಇನ್ನಿತರ ಸಂಸ್ಥೆಗಳು ಸಿಎಸ್‍ಆರ್ ನೆರವು ನೀಡಿದ್ದು ಇದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ನುಡಿದರು.
ಸಮಾಜದಲ್ಲಿ ಯಾರೂ ಮೇಲು ಅಲ್ಲ, ಕೀಳು ಅಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಲಭಿಸಬೇಕು. ಬಂಧಿಗಳು ಇಲ್ಲಿಂದ ಬಿಡುಗಡೆಗೊಂಡ ಬಳಿಕ ಆತ್ಮವಿಶ್ವಾಸದಿಂದ ಉತ್ತಮ ಜೀವನ ಮಾಡಬೇಕು. ಕುಟುಂಬ, ಸಮಾಜಕ್ಕೆ ಆದರ್ಶ ಪ್ರಾಯವಾಗಿ ಕೊಡುಗೆ ನೀಡಬೇಕು. ಜೀವನೋಪಾಯಕ್ಕೆ ಪೂರಕವಾದ ಸ್ವಂತ ಉದ್ಯೋಗ ಮಾಡಬೇಕು ಎಂಬ ಸದಾಶಯ ನನ್ನದಾಗಿದೆ. ತರಬೇತಿ ಪಡೆದವರು ಸ್ವಂತ ಸೈಬರ್ ಕೇಂದ್ರ, ಸೇವಾ ಕೇಂದ್ರಗಳನ್ನು ತೆರೆದು ಇತರರಿಗೆ ಮಾದರಿಯಾಗಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೇಳಿದರು.
ಕಾರಾಗೃಹದಲ್ಲಿಯೇ ಕಂಪ್ಯೂಟರ್ ಕಲಿಯುವ ಅವಕಾಶವನ್ನು ಇತರರು ಸದುಪಯೋಗ ಮಾಡಿಕೊಳ್ಳಬೇಕು. ನಮ್ಮ ಮನವಿಗೆ ಸ್ಪಂದಿಸಿ ಇನ್‍ಫೋಸಿಸ್ ನಂತಹ ದೊಡ್ಡ ಸಂಸ್ಥೆ ವಿವಿಧ ಕೋರ್ಸುಗಳನ್ನು ಕಲಿಸಲು ಮುಂದೆ ಬಂದಿದೆ. ಜಿಲ್ಲೆಗೆ ಲಭಿಸಿರುವ ಈ ಸದಾವಕಾಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ಇತರೆ ಜಿಲ್ಲೆಗಳಿಗೂ ಈ ಕಾರ್ಯ ಮಾದರಿಯಾಗಲಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಸಹ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಪ್ರಮಾಣ ಪತ್ರ ವಿತರಿಸಿದರು.
ಕಾರಾಗೃಹದ ಅಧೀಕ್ಷಕರಾದ ಎನ್.ಎಸ್. ಶಿವಕುಮಾರ್, ಇನ್‍ಫೋಸಿಸ್ ಸಂಸ್ಥೆಯ ಪ್ರೋಗ್ರಾಂ ವ್ಯವಸ್ಥಾಪಕರಾದ ಬಿಳಿಗಿರಿರಂಗ, ಐಐಎಚ್‍ಟಿ ಸಂಸ್ಥೆಯ ಬೋಧಕ ಮುಖ್ಯಸ್ಥರಾದ ಶಿವಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.