ಶಾಸಕರ ಮಲತಾಯಿ ಧೋರಣೆಗೆ ವಡಗೂರು ಗ್ರಾಮಸ್ಥರ ಕಿಡಿ
ಕೋಲಾರ,ಜೂ.೨೧- ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ವಡಗೂರು ಗ್ರಾಮದ ಮುಖ್ಯ ರಸ್ತೆಯನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಬೇಕು, ಇಲ್ಲದೆ ಹೋದರೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಗ್ರಾಮಸ್ಥರು ಹಾಗೂ ಕರವೇ ಸಂಘಟನೆಯಿಂದ ಹೆದ್ದಾರಿಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಕರವೇ ನಾರಾಯಣಗೌಡ ಬಣದ ರೈತ ಘಟಕದ ಜಿಲ್ಲಾಧ್ಯಕ್ಷ ಶಂಕರ್‌ರೆಡ್ಡಿ ಎಚ್ಚರಿಸಿದರು.
ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ, ಎನ್.ಹೆಚ್-೭೫ ಸಂಪರ್ಕ ಕಲ್ಪಿಸುವ ಗ್ರಾಮದ ರಸ್ತೆಯಲ್ಲಿ ತಿಮ್ಮಸಂದ್ರ, ಗಿರ್‍ನಹಳ್ಳಿ, ಅಬ್ಬಣಿ ಗ್ರಾಮಗಳಿಂದ ಸುಮಾರು ನೂರಾರು ವಿದ್ಯಾರ್ಥಿಗಳು ಕೊರ್ ಇನ್ ಶಾಲೆ ಮತ್ತು ಕೆಂಬೋಡಿ ಜನತಾ ಪ್ರೌಢಶಾಲೆಗಳಿಗೆ ಬರಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ವಡಗೂರು ಗ್ರಾಮದ ರಸ್ತೆಗಳು ಸುಮಾರು ವರ್ಷಗಳಿಂದ ಗುಂಡಿಗಳು ಬಿದ್ದಿದೆ. ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಮಕರು ಓಡಾಡುವಾಗ ಇಡೀ ಶಾಪ ಹಾಕುವಂತಾಗಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಳೆದ ಹತ್ತು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಏಕೆಂದರೆ ಹುತ್ತೂರು ಹೋಬಳಿಯಲ್ಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಮತ ನೀಡಿಲ್ಲ ಎಂಬ ಕಾರಣದಿಂದ ಹುತ್ತೂರು ಹೋಬಳಿ ಸೇರಿದಂತೆ ವಡಗೂರು ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಹುತ್ತೂರು ಹೋಬಳಿ ಕೋಲಾರ ವಿಧಾನಸಭಾ ಕೇತ್ರದಲ್ಲಿದ್ದ ಸಂದರ್ಭದಲ್ಲಿ ಶಾಸಕರಾಗಿದ್ದ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದಿ ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡರ ಮತ್ತು ಕೆ.ಶ್ರೀನಿವಾಸಗೌಡರ ಅವಧಿಯಲ್ಲಿ ಹುತ್ತೂರು ಹೋಬಳಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿತ್ತು. ಹುತ್ತೂರು ಹೋಬಳಿ ಕ್ಷೇತ್ರ ವಿಂಗಡಣೆ ಆದ ಸಂದರ್ಭದಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿತು. ಅಂದಿನಿಂದ ಇಂದಿನವರೆಗೆ ಶಾಸಕರಾಗಿರುವ ಎಸ್.ಎನ್.ನಾರಾಯಣಸ್ವಾಮಿ ಮತ ನೀಡಿಲ್ಲವೆಂಬ ಕಾರಣಕ್ಕೆ ಹೋಬಳಿಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಇನ್ನು ಇವರ ಹಿಂಬಾಲಕರು ಚುನಾವಣೆಗಳ ಸಂದರ್ಭದಲ್ಲಿ ಬಡಾಯಿ ಕೊಚ್ಚಿಕೊಂಡು ನಮ್ಮ ಶಾಸಕರು ಮತ್ತೆ ಬಂದರೆ ಅಭಿವೃದ್ಧಿ ಇನ್ನಷ್ಟು ಆಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಾ, ಕಾಮಗಾರಿಗಳನ್ನು ತಾವೇ ಮಾಡಿಸಿ ಕೆಲವೇ ದಿನಗಳಲ್ಲಿ ಅದು ಕಳಪೆ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಇದೇನಾ ಶಾಸಕರ ಅಬಿವೃದ್ಧಿ ಇದೇನಾ ? ಗ್ರಾಮಗಳ ಅಭಿವೃದ್ಧಿ ಎಂದರೆ ಇದೇನಾ ? ಎಂದು ಲೇವಡಿ ಮಾಡಿದರು.
ಶಾಸಕ ಎಸ್‌ಎನ್‌ನಾರಾಯಣಸ್ವಾಮಿ ಅವರೇ ಹುತ್ತೂರು ಹೋಬಳಿಯಿಂದ ನಿಮಗೆ ಮತ ಬಂದಿಲ್ಲವೆಂದರೆ ಬಂಗಾರಪೇಟೆ ಕ್ಷೇತ್ರದಿಂದ ಹುತ್ತೂರು ಹೋಬಳಿಯನ್ನು ಕೋಲಾರ ತಾಲೂಕಿಗೆ ಸೇರಿಸಿ, ಮುಂದೆ ಆದರೂ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶಗಳು ಒದಗಿ ಬರುತ್ತದೆ ಎಂದು ಕಾದು ನೋಡೋಣ ಎಂದರು.
ಬಂಗಾರಪೇಟೆ ತಾಲೂಕಿಗೆ ಹುತ್ತೂರು ಹೋಬಳಿ ಸೇರಿದ್ದು, ಹೋಬಳಿಯ ಗ್ರಾಮಸ್ಥರಿಗೆ ಸಮಾಧಾನವಿಲ್ಲವಾಗಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರಿಗೆ ಸಮಾಧಾನವಿಲ್ಲವೆಂದರೆ ಹುತ್ತೂರು ಹೋಬಳಿ ಕೋಲಾರ ತಾಲೂಕಿಗೆ ಸೇರಿಸಿ ಎಂದು ಒತ್ತಾಯಿಸಿದರೆ, ಕೋಲಾರ ಜಿಲ್ಲಾ ಕೇಂದ್ರಕ್ಕೆ ಹುತ್ತೂರು ಹೋಬಳಿ ೬ ಕಿ.ಮೀ ದೂರದಲ್ಲಿದ್ದರೂ ಸಹ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಅಭಿವೃದ್ಧಿಯಾಗುವ ಕನಸು ಸಹ ಕಾಣುವಂತಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರು ಮುಂದೆ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂದರೆ, ಹುತ್ತೂರು ಹೋಬಳಿಯನ್ನು ಕೋಲಾರಕ್ಕೆ ಸೇರಿಸಿಬಿಡಿ ಎಂದು ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಮಿಕ ಘಟಕದ ತಾಲೂಕ ಅಧ್ಯಕ್ಷ ಡಿ.ವಿ.ಮಂಜುನಾಥ್, ಸುರೇಶ್, ಕೋಲಾರ ತಾಲೂಕು ಅಧ್ಯಕ್ಷ ಯಾರಂಘಟ್ಟ ಶಶಿ, ಕೋಳಿ ಸೀನಪ್ಪ, ಹರೀಶ್, ಗಿರೀಶ್, ಆನಂದ್, ಮುನಿಬೈರಪ್ಪ, ವಿಶ್ವನಾಥ್ ಇದ್ದರು.