ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಕ್ಕೆ ವಿರೋಧಿಸಿ ಅಂಗನವಾಡಿ ನೌಕರರ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.21:ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಆರಂಭಿಸುತ್ತಿರುವುದರಿಂದ ಅಂಗನವಾಡಿ ಫಲಾನುಭವಿಗಳು ಮತ್ತು ಸೇವಾ ನಿರತರ ಮೇಲೆ ಆಗಲಿವೆ ಎನ್ನುವ ಅಡ್ಡ ಪರಿಣಾಮಗಳ ಕುರಿತು ಅಲ್ಲಿನ ಜನರು ಮತ್ತು ಅಂಗನವಾಡಿ ನೌಕರರ ಆತಂಕಗಳನ್ನು ಸರ್ಕಾರ ನಿವಾರಿಸಿ ಸೂಕ್ತ ಸ್ಪಷ್ಟನೆ ನೀಡಲು ಒತ್ತಾಯಿಸಿ ಎ.ಐ.ಯು.ಟಿ.ಯು.ಸಿ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎ.ಐ.ಯು.ಟಿ.ಯು.ಸಿ ಜಿಲ್ಲಾದ್ಯಕ್ಷÀ ಮಲ್ಲಿಕಾರ್ಜುನ ಹೆಚ್.ಟಿ. ಮಾತನಾಡಿ, ರಾಜ್ಯದಲ್ಲಿ ಮಹತ್ತರವಾದ ಅಂಗನವಾಡಿ ಯೋಜನೆ ಜಾರಿಯಲ್ಲಿ ಇದ್ದಾಗಿಯೂ, ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ನೀಡುವ ನಿರ್ಧಾರ ಕೈಗೊಂಡ ಬಳಿಕ ಅಂಗನವಾಡಿ ನೌಕರರು ಬಹಳ ಆತಂಕಕ್ಕೊಳಗಾಗಿದ್ದಾರೆ. ಏಕೆಂದರೆ ಎಲ್‍ಕೆಜಿ, ಯುಕೆಜಿ ಆರಂಭಗೊಳ್ಳಲಿರುವ ಶಾಲೆಗಳ ಪ್ರದೇಶದ ಮಕ್ಕಳು ಅಲ್ಲಿಗೆ ಹೋದರೆ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ ಈ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಬರುವುದೆಂದು, ಅಲ್ಲಿ ಕೆಲಸ ಮಾಡುವವರು ಕೆಲಸವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ. ಅಂಗನವಾಡಿ ಕ್ಷೇತ್ರ ವ್ಯಾಪ್ತಿಯ ಜನಸಾಮಾನ್ಯರೂ ಕೂಡಾ ಅಂಗನವಾಡಿ ಕೇಂದ್ರಗಳಿಂದ ಕಳೆದ ಸುಮಾರು 50ವರ್ಷಗಳಿಂದ ಇಲ್ಲಿಯವರೆಗೂ ಲಭಿಸುತ್ತಿದ್ದ ಅಮೂಲ್ಯವಾದ ವಿವಿಧ ಸೌಲಭ್ಯಗಳು ನಿಂತು ಹೋಗುವುವೇ ಎಂದು ಆತಂಕಿತರಾಗಿದ್ದಾರೆ. ಆದ್ದರಿಂದ ಈ ಕೂಡಲೇ ಅಂಗನವಾಡಿ ನೌಕರರಲ್ಲಿ ಮೂಡಿದ ಎಲ್ಲಾ ಗೊಂದಲಗಳನ್ನು ಪರಿಹರಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷೆ ನಿಂಗಮ್ಮ ಮಠ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳ ಜೊತೆಗೆ ಸರ್ಕಾರ ಇತರ ಇಲಾಖೆಗಳ ವಿವಿಧ ಕೆಲಸಗಳ ಹೊರೆಯಿಂದ ಅಂಗನವಾಡಿ ಕೆಲಸವನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಅವರದಲ್ಲದೇ ಇರುವ ಹಲವಾರು ಕೆಲಸಗಳಿಂದ ಬಿಡಿಸಿ ಅವರದೇ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ ಲಕ್ಷಟ್ಟಿ ಅವರು ಮಾತನಾಡಿ, ಸರಕಾರ ಕೂಡಲೇ ಎಚ್ಚೆತ್ತುಕೊಂಡು ಅಂಗನವಾಡಿ ನೌಕರರ ಈ ಸಮಸ್ಯೆಗಳನ್ನು ಬಗೆ ಹರಿಸಬೇಕು. ಒಂದು ವೇಳೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಸಾವಿತ್ರಿ ನಾಗರತ್ತಿ, ರಶ್ಮಿ ಗುತ್ತೇದಾರ, ಸವಿತಾ ತೇರದಾಳ, ಗೀತಾ ಡೆಮ್ರಿ, ಸತ್ಯವ್ವ ಹಡಪದ, ಭಾಗ್ಯಶ್ರೀ ಇಂಡಿ, ರೇಣುಕಾ ತಾಜಪುರ, ಶೋಭಾ ಹಿರೇಕುರುಬರ, ಬೇಬಿ ಲಮಾಣಿ, ಗಂಗಾ ಉಪ್ಪಲದಿನ್ನಿ, ಶಾಂತಾ ಕಠಾರಿ ಮುಂತಾದವರು ಭಾಗವಹಿಸಿದ್ದರು.