ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯಲಿ ; ನಾಗರಾಜಪ್ಪ
ಗೌರಿಬಿದನೂರು, ಜೂ೨೧: ಸೇವಾ ಮನೋಭಾವದ ಜೊತೆಗೆ ವ್ಯಕ್ತಿತ್ವವನ್ನು ಮೌಲ್ಯಾಧಾರಿತವಾಗಿ ಬೆಳೆಸಿಕೊಳ್ಳಲು ಎನ್ ಎಸ್ ಎಸ್ ಶಿಬಿರಗಳು ಸಹಕಾರಿಯಾಗಲಿವೆ, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾಗಿದೆ ಎಂದು ಅ ಇ ಸಂ ನ್ಯಾಷನಲ್ ಪದವಿ ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿಯ ಚೇರ್ಮನ್ ನಾಗರಾಜಪ್ಪ ತಿಳಿಸಿದರು.
ತಾಲ್ಲೂಕಿನ ಎಚ್.ನಾಗಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನ್ಯಾಷನಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ’ ೭ ದಿನಗಳ ವಾರ್ಷಿಕ ವಿಶೇಷ ಶಿಬಿರ’ ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ಸೇವಾ ಮನೋಭಾವದ ಜತೆಗೆ ನೆರೆಯ ಪರಿಸರ ಮತ್ತು ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಗಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಉಳಿಸುವುದು ಅನಿವಾರ್ಯವಾಗಿದೆ. ಶಿಕ್ಷಣ ತಜ್ಞ, ಸರಳ ವ್ಯಕ್ತಿತ್ವದ ಸಾಕಾರ ಮೂರ್ತಿಯಾಗಿದ್ದ ಡಾ.ಎಚ್.ನರಸಿಂಹಯ್ಯ ರವರ ಆಶಯಗಳಿಗೆ ತಕ್ಕಂತೆ ನಾವೆಲ್ಲರೂ ಬದುಕು ಕಟ್ಟಿಕೊಂಡು ಸೇವಾ ಶಿಬಿರದ ವಿಶೇಷ ದಿನಗಳ ನೆನಪಿನಲ್ಲಿ ಮನೆಯಂಗಳ ಮತ್ತು ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಎಸ್.ಗಾಯತ್ರಿ ಮಾತನಾಡಿ, ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಎಚ್.ನಾಗಸಂದ್ರದಲ್ಲಿ ಆಯೋಜಿಸಿರುವ ಏಳು ದಿನಗಳ ಶಿಬಿರವು ಯಶಸ್ವಿ ಕಾಣಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮದಿಂದ ಶಿಬಿರದಲ್ಲಿ ಭಾಗವಹಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕಾಗಿದೆ. ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಸ್.ಮಹೇಶ್ ಮಾತನಾಡಿ, ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಸಮಾಜಘಾತುಕ ಚಟುವಟಿಕೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ಹಂತದಿಂದಲೇ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ವಿಚಾರಗಳನ್ನು ಅರಿತು ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇಂದಿನ ಯುವ ಜನತೆ ದೇಶದ ಆಸ್ತಿಯಾಗಿದ್ದು, ಅವರಲ್ಲಿ ಸೇವಾ ಮನೋಭಾವ ಬೆಳೆಸುವ ಪ್ರಯತ್ನ ಮಹತ್ವಪೂರ್ಣವಾಗಿದೆ. ಕಾಲೇಜು ಹಂತದಲ್ಲಿ ಕೇವಲ ತರಗತಿಯಲ್ಲಿನ ಪಠ್ಯ ವಿಷಯಗಳನ್ನು ಕಲಿಯದೆ ಸಮಾಜದಲ್ಲಿ ಸಿಗುವ ಪಠ್ಯೇತರ ವಿಷಯಗಳು ಮತ್ತು ಬದುಕಿಗೆ ಪೂರಕವಾದ ಪಠ್ಯವನ್ನು ಕಲಿಯಬೇಕಾಗಿದೆ. ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳ ಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ನಾಗಮ್ಮ, ಸದಸ್ಯೆಯರಾದ ಲಕ್ಷ್ಮಿನರಸಮ್ಮ ಮತ್ತು ಗ್ರಾಮದ ಹಿರಿಯ ಮುಖಂಡರಾದ ಶ್ರೀರಾಮರೆಡ್ಡಿ ರವರನ್ನು ವೇದಿಕೆಯಲ್ಲಿ ಅಭಿನಂಧಿಸಿ ಗೌರವಿಸಿದರು.
ಶಿಬಿರದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ.ಬಿ.ನೇತ್ರ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಜಯರಾಮ್, ಪತ್ರಕರ್ತರಾದ ಎ.ಎಸ್.ಜಗನ್ನಾಥ್ ಆರ್ಕುಂದ, ಶಿಬಿರಾಧಿಕಾರಿ ಪ್ರೊ.ಎಸ್.ಶ್ರೇಯಸ್, ಶಿಬಿರದ ಸಹಾಯಕ ಶಿಬಿರಾಧಿಕಾರಿ ಷರೀಫಾಬಾನು, ಉಪನ್ಯಾಸಕರಾದ ಡಾ.ಶೈಲಜಸಪ್ತಗಿರಿ.ಎ.ಬಿ, ಡಾ.ರಾಮಾಂಜಿ, ಪ್ರೊ.ಜಗದೀಶ್, ಡಾ.ಗುಣರಂಜನಿ, ಮುಗಳೇಶ್ವರ್, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.