ಜಗತ್ತಿಗೇ ಭಾರತ ಯೋಗ ಗುರು: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.21:ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 10ನೇ ಅಂತರಾಷ್ಟ್ರೀಯ ಯೋಗ ದಿನವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಇಂದು ಏಷ್ಯಾ ಖಂಡದ ಒಂದು ಭಾಗವಾಗಿ ಉಳಿದಿಲ್ಲ. ಅದು ಯೋಗದಿಂದ ಜಗತ್ತಿನ ಗುರುವಿನ ಸ್ಥಾನದೆಡೆಗೆ ದಾಪುಗಾಲು ಇಡುತ್ತಿದೆ. ಸೌದಿ ಅರೇಬಿಯಾ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಯೋಗ ಮಾಡಲಾಗುತ್ತದೆ. ಈಗ ಭಾರತ ಯೋಗದಲ್ಲಿ ಜಗತ್ತಿಗೆ ಮಾದರಿಯಾಗಿದೆ ಎಂದರು.
ಪ್ರತಿಯೊಬ್ಬರು ಯೋಗದಿಂದ ನಿರೋಗಿಯಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ದಿನಕ್ಕೆ ಅರ್ಧ ಗಂಟೆ ಯೋಗ ಮಾಡಿ ಬಿಪಿ, ಶುಗರ್ ನಿಯಂತ್ರಣದಲ್ಲಿ ಇಡುವುದಲ್ಲದೆ ಅನೇಕ ರೋಗಗಳಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿದರು. ಯೋಗದಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ಸಾಕಷ್ಟು ಉದ್ಯಾನವನಗಳಿವೆ. ವಾಕಿಂಗ್ ಪಾರ್ಕ್, ಜಿಮ್‍ಗಳಿವೆ. ಆದ್ದರಿಂದ ಯೋಗ ಮಾಡಿ ಆಯುರಾರೋಗ್ಯವಂತರಾಗಿ ಬದುಕಬೇಕು ಎಂದು ಯತ್ನಾಳ ವಿಜಯಪುರ ಜನತೆಗೆ ಶುಭ ಹಾರೈಸಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಶಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಧೆಗಳ ಪದಾಧಿಕಾರಿಗಳು, ಸಮಾಜ ಕಾರ್ಯಕರ್ತರು ಮುಂತಾದವರು ಯೋಗದಲ್ಲಿ ಭಾಗವಹಿಸಿದ್ದರು.
ನಗರದ ವಿವಿಧೆಡೆ ಸೇರಿದಂತೆ ಜಿಲ್ಲೆಯಾದ್ಯಂತ ಯೋಗ ದಿನವನ್ನು ಆಚರಿಸಲಾಯಿತು.