ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಕಲಬುರಗಿ,ಜೂ.20-ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸದ ಆರೊಪಿಗೆ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿದೆ.
ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ದರಿಯಾಪೂರ ತಾಲ್ಲೂಕಿನ ಅರಳಾದ ವಿಕ್ಕಿ ತಂದೆ ಸಮಾದಾನ ವಾನಖಡೆ (25) ಶಿಕ್ಷೆಗೆ ಗುರಿಯಾದ ಆರೋಪಿ.
ಪಿಯುಸಿ ಪರೀಕ್ಷೆ ಮುಗಿಸಿಕೊಂಡು ಆಳಂದ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್ಸಿಗಾಗಿ ಬಾಲಕಿ ಕಾಯುತ್ತ ನಿಂತಿದ್ದ ವೇಳೆ ಆರೋಪಿ ಬಸ್ ನಿಲ್ದಾಣದ ಸುತ್ತ ಮುತ್ತ ತಿರುಗಾಡುತ್ತ ತನ್ನ ಮೊಬೈಲ್‍ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನೊಂದಿಗೆ ಚಾಟಿಂಗ್ ಮಾಡಿರುವ ವಿಡಿಯೋ, ಸ್ಕ್ರೀನ್ ಶಾಟ್ ತೆಗೆದು ಬಾಲಕಿಗೆ ಗೊತ್ತಾಗದಂತೆ ಸಂಗ್ರಹಿಸಿಕೊಂಡು ಅವುಗಳನ್ನು ತೋರಿಸಿ ನೀನು ನನ್ನೊಂದಿಗೆ ಅಮರಾವತಿಗೆ ಬಾರದಿದ್ದಲ್ಲಿ ಈ ಎಲ್ಲಾ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಾನ, ಮರ್ಯಾದೆ ತೆಗೆಯುವುದಾಗಿ ಹೆದರಿಸಿ, ಬಾರದೇ ಇದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಬಾಲಕಿಯನ್ನು ಆಳಂದದಿಂದ ಸೊಲ್ಲಾಪುರಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಖಾಸಗಿ ಬಸ್ಸಿನಲ್ಲಿ ಪುಣೆ, ಹಡಪಸರಗೆ ಕರೆದುಕೊಂಡು ಹೋಗಿದ್ದಾನೆ. ಮರುದಿನ ಅಮರಾವತಿಯ ಅರಳಾ ಗ್ರಾಮದ ತನ್ನ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಯಾರೂ ಇಲ್ಲದೇ ಇರುವ ವೇಳೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಬಾಲಕಿ ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪಿಐ ಮಹಾದೇವ ಪಂಚಮುಖಿ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ ಆರ್‍ಟಿಎಸ್‍ಸಿ-1ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಆರೋಪಿ ವಿಕ್ಕಿ ತಂದೆ ಸಮಾದಾನ ವಾನಖಡೆಗೆ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಲ್ಲದೆ ಕಾನೂನು ಪ್ರಾಧಿಕಾರದ ವತಿಯಿಂದ ನೊಂದ ಬಾಲಕಿಗೆ 5 ಲಕ್ಷ ರೂ.ಪರಿಹಾರವನ್ನು ತೀರ್ಪಿನ ದಿನಾಂಕದಿಂದ 1 ತಿಂಗಳ ಅವಧಿಯೊಳಗೆ ನೀಡಬೇಕು ಎಂದು ಆದೇಶಿಸಿದ್ದಾರೆ.