ಸಂತ್ರಸ್ತ ಠೇವಣಿದಾರರ ಅಸಹಕಾರ ಹೋರಾಟಕ್ಕೆ ಅಟ್ಟೂರ್ ಬೆಂಬಲ: ನ್ಯಾಯ ಒದಗಿಸಲು ಒತ್ತಾಯ
ಕಲಬುರಗಿ:ಸೆ.25:ವಂಚನೆ ಮಾಡಿದ ಕಂಪೆನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಹೂಡಿಕೆದಾರರಿಗೆ ಸರ್ಕಾರ ಹಣ ನೀಡಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಹಣಮಂತರಾಯ್ ಎಸ್. ಅಟ್ಟೂರ್ ಅವರು ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ಅಸಹಕಾರ ಹೋರಾಟಕ್ಕೆ ಬುಧವಾರ ಬೆಂಬಲಿಸಿ ಮಾತನಾಡಿದ ಅವರು, ಕಳೆದ 2019ರಲ್ಲಿ ಸಂಸತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019ರನ್ವಯ ಸರ್ವಾನುಮತದಿಂದ ಜಾರಿಗೆ ತಂದಿದೆ. ಮೋಸದ ಕಂಪೆನಿಗಳು ಮತ್ತು ಸೊಸೈಟಿಗಳಲ್ಲಿ ಕಳೆದು ಹೋದ ಠೇವಣಿ ಮತ್ತು ಮರುಪಾವತಿಸಲಾಗುತ್ತದೆ ಎಂದರು.
ಅರ್ಜಿದಾರರು 180 ದಿನಗಳಲ್ಲಿ ಮೂರು ಪಟ್ಟು ಮರುಪಾವತಿ ಪಡೆಯಲು ಕಾನೂನು ಬದ್ಧ ಹಕ್ಕನ್ನು ನೀಡಿದ್ದಾರೆ. ಈ ಕಾಯ್ದೆ ಅನ್ವಯ ಸಾರ್ವಜನಿಕರಿಗೆ ಸರ್ಕಾರ ಹಣ ಮರುಪಾವತಿಸಬೇಕು. ಕಂಪೆನಿಗಳ ಭರವಸೆ ಮೇಲೆ ಸಾರ್ವಜನಿಕರು ಹಣವನ್ನು ಹೂಡಿದ್ದಾರೆ. ದೇಶಾದ್ಯಂತ ಸಾವಿರಾರು ಕೋಟಿ ಜನ ಹಣವನ್ನು ಠೇವಣಿ ಮಾಡಿ ಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಹಣ ನೀಡಬೇಕು ಹಾಗೂ ಹಣ ಪಡೆದ ಕಂಪೆನಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹೋರಾಟಕ್ಕೆ ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ರಾಷ್ಟ್ರ ಮಟ್ಟದಲ್ಲಿ ಚರ್ಚಿಸಿ ಬೆಂಬಲ ಸೂಚಿಸುತ್ತದೆ ಎಂದು ಅವರು ಹೇಳಿದರು. ಹೋರಾಟದಲ್ಲಿ ವೈ.ಎಸ್. ತಳವಾರ್ ಬಳ್ಳುಂಡಗಿ, ಶ್ರೀಶೈಲ್ ಪಾಟೀಲ್, ನಿವೃತ್ತ ಶಿಕ್ಷಕರಾದ ನೀಲಕಂಠಯ್ಯ ಹಿರೇಮಠ್, ವಿಠ್ಠಲ್ ಕುಂಬಾರ್, ಶಿವಶರಣಪ್ಪ ಖೋಬರೆ, ಸಿದ್ದರಾಮ್ ಹಣಮಶೆಟ್ಟಿ, ಎ.ಎನ್. ಪರೀಟ್, ವೀರಣ್ಣ ಮಡಿವಾಳ್, ಕಮಲಾ ಕೋರೆ, ಸುಭದ್ರಾಬಾಯಿ ಕಾಂಬಳೆ, ಚಂದ್ರಕಾಂ ಕಲಶೆಟ್ಟಿ, ಜಯರಾಜ್ ಎಸ್. ಮುಗುಳಿ, ಸಿ.ಕೆ. ನಾಟಿಕಾರ್, ಪರ್ವತಯ್ಯ ಸಾಲಿಮಠ್, ವಿಜಯಕುಮಾರ್ ಶೆಟ್ಟಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.