ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಮಂಗಳೂರು ವಿವಿಯಿಂದ ಅಧಿಸೂಚನೆ
ಪುತ್ತೂರು: ಕಳೆದ ೬೬ ವರ್ಷಗಳಿಂದ ಗ್ರಾಮೀಣ ಪ್ರದೇಶದ ಉನ್ನತ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಗುರುತಿಸಿಕೊಂಡಿರುವ ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿಗೆ ಸರ್ಕಾರದ ಅನುಮತಿಯ ಮೇರೆಗೆ ಮಂಗಳೂರು ವಿಶ್ವವಿದ್ಯಾನಿಲಯವು ಕಾಲೇಜಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡುವ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಕಾಲೇಜಿನ ಸಂಚಾಲಕ ವಂ. ಲಾರೆನ್ಸ್ ಮಸ್ಕರೇನಸ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮೊ| ಆಂಟೊನಿ ಪತ್ರಾವೋ ಅವರಿಂದ ಸ್ಥಾಪಿತಗೊಂಡ ಸಂತ ಫಿಲೋಮಿನಾ ಕಾಲೇಜು ೧೯೫೮ರಂದಲೂ ಕಾಲೇಜು ವಿವಿಧ ವಿಷಯಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿದೆ. ಹೆಮ್ಮೆಯ ಶಿಕ್ಷಣ ಸಂಸ್ಥೆಯ ಸಾಧನೆಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಶ್ರೇಣೀಕರಣ ಸಂಸ್ಥೆ(ನ್ಯಾಕ್)ನಿಂದ ಸತತವಾಗಿ ಮೂರು ಬಾರಿ ಎ ಗ್ರೇಡ್ ಮಾನ್ಯತೆ ದೊರೆತಿದೆ. ಮಂಗಳೂರು ಕ್ಯಾಥೋಲಿಕ್ ಶಿಕ್ಷಣ ಬೋರ್ಡ್ ವ್ಯಾಪ್ತಿಯಲ್ಲಿ ಸ್ವಯತ್ತ ಮಾನ್ಯತೆ ಪಡೆದ  ಹೆಗ್ಗಳಿಕೆಯನ್ನು ಸಂತ ಫಿಲೋಮಿನಾ ಪಡೆದುಕೊಂಡಿದೆ ಎಂದರು.
ಎಂಸಿಎ ಆರಂಭ
ಕಾಲೇಜಿನಲ್ಲಿ ಪದವಿ ವಿಭಾಗದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಸಿಎ (ಎಐ ಆಂಡ್ ಎಂಎಲ್) ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂಎಸ್‌ಡಬ್ಲ್ಯೂ, ಎಂಕಾಂ ಹಾಗೂ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಕೋರ್ಸ್‌ಗಳನ್ನು ನೀಡಲಾಗುತ್ತಿದ್ದು ಈ ಶೈಕ್ಷಣೆಕ ವರ್ಷದಿಂದ ಎಂಸಿಎ ಕೋರ್ಸ್‌ನ್ನು ಪ್ರಾರಂಭಿಸಲಾಗುವುದು. ಬಿಬಿಎ, ಬಿಸಿಎ ಹಾಗೂ ಎಂಸಿಎ ಕೋರ್ಸ್‌ಗಳಿಗೆ ಎಐಸಿಟಿಇ ಮಾನ್ಯತೆ ದೊರಕಿದೆ ಎಂದರು.
ಸ್ಟಾರ್ಟ್‌ಅಪ್‌ಗೆ ಆಯ್ಕೆ
ಇದಲ್ಲದೆ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ ನಮ್ಮ ಸಂಸ್ಥೆಯನ್ನು ‘ನೈನ್ ಅತಿಥೇಯ ಸಂಸ್ಥೆಯಾಗಿ ಆಯ್ಕೆ ಮಾಡಿದೆ. (ಎನ್.ಎಚ್.ಐ.) ಕರ್ನಾಟಕ ಸ್ಟಾರ್ಟ್ ಅಪ್ ನೀತಿಯ ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್ (ನೈನ್) ೨.೦ ಕ್ರಿಯಾಶೀಲ ಯುವಕ ಯುವತಿಯರಿಗೆ ನಾವೀನ್ಯತೆ ಮತ್ತು ಉದ್ಯಮಶೀಲತೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಹೊಸ ಕೋರ್ಸ್‌ಗಳಿಗೆ ಯೋಜನೆ
ವಿದ್ಯಾರ್ಥಿಗಳ ಸರ್ವಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲು ಕಾಲೇಜಿನಲ್ಲಿ ೬೦ಕ್ಕೂ ಹೆಚ್ಚಿನ ಕ್ರಿಯಾತ್ಮಕ ಘಟಕಗಳಿವೆ. ಐಸಿಟಿ ಅಕಾಡೆಮಿಯೊಂದಿಗೆ ಒಡಂಬಡಿಕೆಯ ಸಹಾಯದಿಂದ ಸೈಬರ್ ಸೆಕ್ಯುರಿಟಿ ಮುಂತಾದ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಮುಂದೆ ಕ್ಯಾಟರಿಂಗ್, ಹಾಸ್ಪಿಟಾಲಿಟಿಗೆ ಸಂಬಂಧಿಸಿದ ಕೋರ್ಸ್ ಗಳನ್ನೂ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ, ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಉಪಸ್ಥಿತರಿದ್ದರು.