ಭ್ರಷ್ಟಾಚಾರ ವಿರೋಧಿಸಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಮುತ್ತಿಗೆ
ಕಲಬುರಗಿ:ಸೆ.25:ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿನ ವ್ಯಾಪಕ ಭ್ರಷ್ಟಾಚಾರ ವಿರೋಧಿಸಿ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಬೃಹತ್ ಪ್ರತಿಭಟನೆ ಮಾಡಿ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಹಂಜಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಂಜುನಾಥ್ ಕೊಣ್ಣೂರ್, ತಾಲ್ಲೂಕು ಸಂಚಾಲಕ ಮನೋಜ್ ಪಾಟೀಲ್, ನಗರ ಕಾರ್ಯದರ್ಶಿ ಶಾಂತಕುಮಾರ್, ಕಾರ್ಯಕರ್ತರಾದ ಶರಣು, ಆದಿತ್ಯ, ದರ್ಶನ್, ಬಸವರಾಜ್, ದಿಲೀಪ್, ಬಸವರಾಜ್, ಶ್ರವಣ್, ಸಂಜಯ್, ರೋಹಿತ್, ಪ್ರದೀಪ್, ಚೇತನ್, ಅಂಕುಶ್, ರಾಹುಲ್, ಶಿವರಾಜ್, ಅರುಣ್, ಸ್ನೇಹಾ, ಅರ್ಪಿತಾ, ಅನನ್ಯಾ, ಹಾಗೂ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಪಾಂಡು ಮೋರೆ ಅವರು ಮಾತನಾಡಿ, ಜಗತ್ತಿಗೆ ವಿಶ್ವವಿದ್ಯಾಲಯಗಳನ್ನು ಪರಿಚಯಿಸಿದ ನಾಡು ಭಾರತ ವಿಶ್ವವಿದ್ಯಾಲಯ ಎಂದರೆ ಅದು ಜ್ಞಾನದ ದೇಗುಲವಾಗಿರಬೇಕೇ ಹೊರತು ಭ್ರಷ್ಟಾಚಾರದ ಕೇಂದ್ರವಲ್ಲ. ಅದಕ್ಕೆ ಉದಾಹರಣೆ ಎಂಬುವಂತೆ ಗುಲಬರ್ಗಾ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ . ಅಕ್ಷರ ದಾಸೋಹ ವಿದ್ಯಾ ಕಾಶಿ ಆಗಬೇಕೆಂದು 1984ರಿಂದ ಪ್ರಾರಂಭವಾಗಿರುವ ವಿಶ್ವವಿದ್ಯಾಲಯ ಇಂದು ಅನೇಕ ಸಮಸ್ಯೆಗಳ ಗೂಡಾಗಿ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಿಯಾದ ಸಮಯಕ್ಕೆ ಪರೀಕ್ಷೆಗಳನ್ನು ನಡೆಸಬೇಕು. ಪರೀಕ್ಷೆಯಲ್ಲಿ ಅಕ್ರಮ ಅನೇಕ ಕಾಲೇಜುಗಳು ನಡೆಸುತ್ತಿವೆ. ಅದಕ್ಕೆ ದಾಖಲೆ ಸಮೇತ ಮಾಹಿತಿ ಕೊಟ್ಟಿದ್ದೆವು, ಮನವಿ ಕೊಟ್ಟಿದ್ದೆವು. ಆದಾಗ್ಯೂ, ಮತ್ತೆ ಅದೇ ಕಾಲೇಜಿಗೆ ಪರೀಕ್ಷಾ ಕೇಂದ್ರ ಕೊಟ್ಟಿರೋದು ಭ್ರಷ್ಟಾಚಾರಕ್ಕೆ ಇದು ಒಂದು ಉದಾಹರಣೆ ಆಗಿದೆ ಎಂದು ದೂರಿದ ಅವರು, ಹಲವಾರು ವಿದ್ಯಾರ್ಥಿಗಳು ಇಂದು ವಿಶ್ವವಿದ್ಯಾಲಯದ ಬಗ್ಗೆ ಹೇಳುತ್ತಿರುವುದು ಉದ್ದೇಶಪೂರ್ವಕವಾಗಿ ಅಂಕಪಟ್ಟಿಯಲ್ಲಿ ಶೂನ್ಯ ಅಂಕ ಬರುವಂತೆ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಬರಬೇಕು. ಇಲ್ಲಿ ವಿದ್ಯಾರ್ಥಿಗಳಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹಲವು ವಿದ್ಯಾರ್ಥಿಗಳು ಅಳಲು ತೊಡಗಿದ್ದಾರೆ. ವಿಶ್ವವಿದ್ಯಾಲಯಕ್ಕೆ ಬಂದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಸಮಸ್ಯೆ ಬಗೆಹರಿಸದ ನಿರ್ಲಕ್ಷ ವಹಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಯಾವುದಾದರೂ ಅರ್ಜಿಯನ್ನು ವಿಶ್ವವಿದ್ಯಾಲಯಕ್ಕೆ ಕೊಟ್ಟರೆ ತಿಂಗಳುಗಟ್ಟಲೆ ಮುಂದೋಡುತ್ತಾರೆ ಮತ್ತು ಕಾಯಿಸುತ್ತಾರೆ. ಸರಿಯಾದ ಸಮಯಕ್ಕೆ ಕೆಲಸ ಮಾಡಿ ಕೊಡುವುದಿಲ್ಲ. ವಿಶ್ವವಿದ್ಯಾಲಯದ ಸರಿಯಾದ ಅಕ್ಯಾಡೆಮಿ ಕ್ಯಾಲೆಂಡರ್ ಇಲ್ಲ. ಬೇರೆ ವಿಷಯ ಹೋಲಿಕೆ ಮಾಡಿದರೆ ಸುಮಾರು ಆರು ತಿಂಗಳಿಂದ ಏಳು ತಿಂಗಳು ವಿಶ್ವವಿದ್ಯಾಲಯದ ಕ್ಯಾಲೆಂಡರ್ ಹಿಂದೆ ಇದೆ. ಇದಕ್ಕೆ ಕಾರಣ ಅಲ್ಲಿರುವ ಅಧಿಕಾರಿಗಳೇ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಕರ್ನಾಟಕದ ಯಾವುದೇ ಭಾಗದಲ್ಲಿ ಅಡ್ಮಿಶನ್ ತೆಗೆದುಕೊಳ್ಳಲು ಆಗುತ್ತಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಸಕಾಲದಲ್ಲಿ ನೀಡುತ್ತಿಲ್ಲ ಎಂದು ಅವರು ದೂರಿದರು.
ಪರೀಕ್ಷಾ ಕೇಂದ್ರಗಳು ಪಾರದರ್ಶಕವಾಗಿಲ್ಲ. ಈ ಭಾಗಕ್ಕೆ ಇದು ಒಂದು ದೊಡ್ಡ ಕಳಂಕ ಹತ್ತಿದೆ. ಭ್ರಷ್ಟಾಚಾರಕ್ಕೆ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ. ಕಾಫಿ ಚೀಟಿಗಳ ನಾಡು ಎಂಬ ಹಣೆಪಟ್ಟಿ ಕಟ್ಟಲು ಮುಂದಾಗುತ್ತಿದ್ದೀರಿ. ಇದೆಲ್ಲದಕ್ಕೂ ಮೂಲ ಕಾರಣ ನಿಮ್ಮ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ ಎಂದು ಒತಾಯಿಸಿದ ಅವರು, ಅಂಕಪಟ್ಟಿಯನ್ನು ಸರಿಯಾದ ಸಮಯಕ್ಕೆ ವಿಶ್ವವಿದ್ಯಾಲಯ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಿಶ್ವವಿದ್ಯಾಲಯದ ಹಾಸ್ಟೆಲ್‍ಗಳಲ್ಲಿ ಸರಿಯಾದ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಎಲ್ಲ ಸಮಸ್ಯೆಗಳನ್ನು ವಿಶ್ವವಿದ್ಯಾಲಯ ತಕ್ಷಣವೇ ಸರಿ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಈ ಭಾಗದ ಜನರಿಗೆ ಒಳ್ಳೆಯ ಶಿಕ್ಷಣ ನೀಡುವುದರ ಮೂಲಕ ಶರಣಬಸವೇಶ್ವರರ ನಾಡು ಆಗಿರುವ ನಮ್ಮ ಭಾಗವನ್ನು ಅಕ್ಷರ ದಾಸೋಹದ ನಾಡನ್ನಾಗಿ ಬದಲಾಯಿಸಬೇಕೆಂದು ಕೋರಿದರು.