ಉಪನೊಂದಣಾಧಿಕಾರಿಗಳ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಕೆ ಹಂಜಗಿ ಗ್ರಾಮದ ಸರ್ಕಾರಿ ಜಮೀನು ನಿಯಮ ಬಾಹಿರ ಖಾತೆ ಬದಲಾವಣೆ
ವಿಜಯಪುರ,ಜೂ.20:ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಸರ್ಕಾರಿ ಜಮೀನು ರಿ.ಸ.ನಂ.531/1 ಕ್ಷೇತ್ರದ ಪೈಕಿ 3-20 ಎಕರೆ ಜಮೀನು ನಿಯಮ ಬಾಹಿರವಾಗಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಇಂಡಿ ಉಪನೋಂದಣಾಧಿಕಾರಿಗಳ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಇಂಡಿ ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಹಂಜಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಇವರ ಹೆಸರಿನಲ್ಲಿರುವ ಸರ್ಕಾರಿ ಜಮೀನನ್ನು ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹ ಅಧಿಕಾರಿಗಳ ಅಧಿಕಾರ ಪತ್ರ (ಪಾವರ್ ಆಫ್ ಅಟಾರ್ನಿ) ನೀಡದೇ ಇದ್ದಾಗಿಯೂ ಕೇವಲ ಪಂಚಾಯತಿ ಅಭಿವೃದ್ದಿ ಅಧಿಕಾರಿ ರವಿ ಕರ್ಜಗಿ ಇವರೊಬ್ಬರ ಪತ್ರ ಮತ್ತು ಸಹಿ ಮೇಲೆ ಪರಭಾರೆ ಮಾಡಿದ್ದು, ಕೇವಲ ಪಂಚಾಯತ್ ಅಭಿವೃದ್ದಿ ಅಧಿಕಾರಿ ದೃಢೀಕರಣ ಮೇಲೆ ಆಸ್ತಿ ಪರಭಾರೆ ಮಾಡಿರುವುದು ಇಂಡಿಯ ಉಪನೋಂದಣಾಧಿಕಾರಿ ರವೀಂದ್ರನಾಥ ಹಂಚಿನಾಳ ಅವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಆಸ್ತಿಯನ್ನು ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿ ಹೆಸರಿಗೆ ಹಸ್ತಾಂತರಿಸಿದ್ದು ಕಂಡು ಬಂದಿದೆ.
ಈ ಕುರಿತು ಇಂಡಿ ಉಪವಿಭಾಗಾಧಿಕಾರಿಗಳು, ಉಪನೋಂದಣಾಧಿಕಾರಿಗಳಿಗೆ ದಿನಾಂಕ : 29-4-2024 ರಂದು ಪತ್ರ ಬರೆದು ವರದಿ ಸಲ್ಲಿಸಲು ಸೂಚಿಸಿದ್ದರು. ಆ ಪತ್ರಕ್ಕೆ ಉಪನೋಂದಣಾಧಿಕಾರಿ ಈವರೆಗೆ ಯಾವುದೇ ಉತ್ತರ ನೀಡಿರುವುದಿಲ್ಲ. ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ದಿನಾಂಕ : 07-06-2024ರಂದು ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ಲಿಖಿತ ಉತ್ತರ ಮತ್ತು ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಕಚೇರಿಗೆ ಖುದ್ದಾಗಿ ಹಾಜರಾಗಿ ವರದಿ ಸಲ್ಲಿಸಲು ತಿಳಿಸಲಾಗಿತ್ತಾದರೂ ಯಾವುದಕ್ಕೂ ಸ್ಪಂದಿಸದೇ ಸರಕಾರಿ ಕೆಲಸದಲ್ಲಿ ನಿμÁ್ಕಳಜಿತನ ತೋರುತ್ತಿರುವುದರಿಂದ ಇಂಡಿ ಉಪನೋಂದಣಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.