ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ: ಎಸ್.ಎಂ. ಪಾಟೀಲ ಗಣಿಹಾರ ತೀವ್ರ ಆಕ್ಷೇಪ
ವಿಜಯಪುರ, ಜೂ.20:ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಕೆಪಿಸಿಸಿ ವಕ್ತಾರ ಎಸ್.ಎಂ ಪಾಟೀಲ ಗಣಿಹಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರದ ಆಡಳಿತ ಕಾಲಾವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿದೆ. ಅದನ್ನು ಮುಚ್ಚಿ ಕೊಂಡು ರಾಜ್ಯದ ಅಭಿವೃದ್ಧಿಗಾಗಿ ಅಲ್ಪಸ್ವಲ್ಪ ಬೆಲೆ ಏರಿಕೆ ಮಾಡಿದ್ದಕ್ಕೆ ದೊಡ್ಡದಾಗಿ ಕೊಚ್ಚಿಕೊಳ್ಳುತ್ತ ಬಿಜೆಪಿ ಪ್ರತಿಭಟನೆಗೆ ಬೀದಿಗಿಳಿದಿದೆ. ಬಿಜೆಪಿಯವರಿಗೆ ನಾಚಿಕೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಲ್ವೆ ಪ್ಲಾಟ್ ಫಾರಂ ದರ ಏರಿಕೆ, ಎಣ್ಣಿ, ಪೆಟ್ರೋಲ್, ಡಿಸೇಲ್ ಏರಿಕೆ ಮಾಡುತ್ತ ಬಂದಿದೆ ಎಂದು ಟೀಕಿಸಿದರು.
ನೀಟ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಕೇಂದ್ರ ಸರ್ಕಾರ ಕೂಡಲೇ ನೀಟ್ ಪರೀಕ್ಷೆ ರದ್ದುಪಡಿಸಿ ಹೊಸ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಚುನಾವಣೆಯಲ್ಲಿ ಅಕ್ರಮ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇವಿಎಂ ಮಷಿನ್ ಹಗರಣ ಸೇರಿದಂತೆ ಹಲವಾರು ಹಗರಣಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಪ್ರತಿಯೊಂದರ ಮೇಲೆ ಜಿಎಸ್ ಟಿ ವಿಧಿಸಲಾಗುತ್ತಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಕೇವಲ 3 ರೂಪಾಯಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ನಿಜವಾಗಿಯೂ ಬಿಜೆಪಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಅವರು 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಡಾ. ರವಿಕುಮಾರ ಬಿರಾದಾರ ಮಾತನಾಡಿದರು.
ನಾಗರಾಜ ಲಂಬು, ಫಯಾಜ್ ಕಲಾದಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.