ಸಿಎಂ ಸಿದ್ದರಾಮಯ್ಯ ಜ್ಞಾನ ‘ಶೂನ್ಯ’: ಅಶೋಕ್‍ ತಿರುಗೇಟು
ಕಲಬುರಗಿ:ಜೂ.20: ಎಂಬತ್ತು ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಕೊಡದೇ ಹೋಗಿದ್ದರೆ ಈಗ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡುವ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ. ಇದ್ಯಾವುದರ ಪರಿಜ್ಞಾನವೂ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ್ಞಾನದ ಮಟ್ಟ ಬಿಲ್‍ಕುಲ್ ಶೂನ್ಯ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶೋಕ್, ‘ಅಶೋಕ್ ಪೆದ್ದ.ಆತನಿಗೆ ಬುದ್ದಿಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ವರ್ಷದಲ್ಲಿ ಏನೆಲ್ಲಾ ಬರುತ್ತದೆ? ಎಂಬುದರ ಬಗ್ಗೆ ಏನೇನೂ ಗೊತ್ತಿಲ್ಲ. ಹೀಗಿರುವಾಗ ನೀವು 15 ಬಜೆಟ್ ಮಂಡನೆ ಮಾಡಿದ್ದರೂ ನಿಮ್ಮ ನಾಲೇಜ್ ಇಷ್ಟೇನಾ?’ಎಂದು ಪ್ರಶ್ನಿಸಿದರು.
ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿ ಬರುವ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದಿಲ್ಲ. ಅಶೋಕ್ ಸ್ವಲ್ಪದಡ್ಡ. ಆತನಿಗೆ ಏನೂ ಗೊತ್ತಾಗಲ್ಲ ಎಂದಿರುವ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ‘ನೀನು 15 ಬಜೆಟ್ ಮಂಡನೆ ಮಾಡಿದ್ದೀಯಲ್ಲಪ್ಪಾ…? ಇದೇನಾ ನಿನ್ನ ನಾಲೇಡ್ಜ್? ಎಂದು ಏಕವಚನದಲ್ಲಿ ಕುಟುಕಿದರು.
ಒಂದು ವೇಳೆ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ80 ಸಾವಿರಕೋಟಿರೂ. ಖರ್ಚು ಮಾಡಿರದೆ ಹೋಗಿದ್ದರೆ ದರ ಹೆಚ್ಚಳದ ದಾರಿದ್ರ್ಯವೇ ಎದುರಾಗುತ್ತಿರಲಿಲ್ಲ. ಈಗಾಗಲೇ ಪೆಟ್ರೋಲ್,ಡೀಸೆಲ್, ಮುದ್ರಾಂಕ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ವಾಸ್ತವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾದರೆ ರಾಜ್ಯದಲ್ಲಿ ಈಗ ತೆರಿಗೆ ಏರಿಕೆಯ ಪರ್ವ ಶುರುವಾಗಿದೆ ಎಂಬ ಸಂದೇಶವನ್ನು ಖುದ್ದು ರಾಜ್ಯ ಸರ್ಕಾರವೇ ಜನರಿಗೆ ನೀಡಿದೆ ಎಂದು ಅಶೋಕ್ ವ್ಯಾಖ್ಯಾನಿಸಿದರು.