ನಿರಾಶ್ರಿತರಿಗೆ ಆಶ್ರಯ ನೀಡಿ ಅಭಿವೃದ್ಧಿಗೊಳಿಸುವುದು ಅಗತ್ಯ
ಕಲಬುರಗಿ:ಜೂ.20: ನಮ್ಮ ದೇಶ ಸ್ವಾತಂತ್ರ್ಯ ದೊರೆತು 78 ವರ್ಷಗಳು ಕಳೆದರೂ ಕೂಡಾ ಇಂದಿಗೂ ಅನೇಕರಿಗೆ ವಾಸಿಸಲು ಯೋಗ್ಯ ಆಶ್ರಯವಿಲ್ಲ. ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನಿರಾಶ್ರಿತರಿಗೆ ಆಶ್ರಯ ದೊರೆತು, ನಿರಾಶ್ರಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಆಶಯ ವ್ಯಕ್ತಪಡಿಸಿದರು.
ಆಳಂದ ರಸ್ತೆಯಲ್ಲಿರುವ ನಿರಾಶ್ರಿತರಿಗೆ ‘ವಿಶ್ವ ನಿರಾಶ್ರಿತರ ದಿನಾಚರಣೆಯ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಬಟ್ಟೆ, ಆಹಾರ ಧಾನ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಮಾನವೀಯತೆಗಿಂತ ದೊಡ್ಡದು ಯಾವುದು ಇಲ್ಲ. ಬಡವರು, ಅಸಹಾಯಕರಿಗೆ ಸೇವೆ ಮಾಡಿದರೆ, ಅದು ದೇವರ ಸೇವೆ ಮಾಡಿದಂತಾಗುತ್ತದೆ. ಜೀವಾತ್ಮದಲ್ಲಿ ಪರಮಾತ್ಮನನ್ನು ಕಾಣುವ ಮನೋಭಾವ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬಳಗವು ನಿರಂತರವಾಗಿ ಇಂತಹ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ ಎಂದು ನುಡಿದರು.
ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಸೇರಿದಂತೆ ಮತ್ತಿತರರಿದ್ದರು.