ಮಲೇರಿಯಾ, ಡೆಂಗ್ಯೂ ಕಾಯಿಲೆಯ ಬಗ್ಗೆ ಇರಲಿ ಎಚ್ಚರ
ಕಲಬುರಗಿ:ಜೂ.20: ಈಗಾಗಲೇ ಜಿಲ್ಲೆಯಾದ್ಯಂತ ಮಳೆಗಾಲದ ಆರಂಭವಾಗಿದ್ದು, ಈ ಸಮಯದಲ್ಲಿ ಮಲೇರಿಯಾ, ಡೆಂಗ್ಯೂ ಕಾಯಿಲೆಯ ಪ್ರಮಾಣ ಹೆಚ್ಚಳವಾಗಬಹುದು. ಚಳಿ, ನಡುಕ, ಜ್ವರ ಇವುಗಳು ಮಲೇರಿಯಾ ಕಾಯಿಲೆ ಮತ್ತು ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣು, ಕೀಲು ನೋವು, ಬಾಯಿ, ವಸಡು, ಮೂಗಿನಿಂದ ರಕ್ತಸ್ರಾವವಾಗುವುದು, ಚರ್ಮದ ಮೇಲೆ ಅಲ್ಲಲ್ಲಿ ರಕ್ತದ ಗುರುತುಗಳು ಇವುಗಳು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಡಮಾಡದೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಗುರುವಾರ ಜರುಗಿದ ‘ಮಲೇರಿಯಾ ಮತ್ತು ಡೆಂಗ್ಯೂ ಮಾಸಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸೋಂಕಿತ ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಮತ್ತು ಈಡಿಸ್ ಇಜಿಪ್ಟೀ ಎಂಬ ಸೊಳ್ಳೆಯಿಂದ ಡೆಂಗ್ಯೂ ಕಾಯಿಲೆ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ರೋಗ ಹತೋಟಿಯ ಪ್ರಮುಖ ಕ್ರಮವಾಗಿದೆ. ನೀರು ಸಂಗ್ರಹಿಸುವ ತೊಟ್ಟಿಯನ್ನು ಆಗಾಗ್ಗೆ ತೊಳೆಯಬೇಕು. ಬಯಲಿನಲ್ಲಿ ಕಂಡುಬರುವ ತ್ಯಾಜ್ಯಗಳಾದ ಟಯರ್, ಎಳೆ ನೀರಿನ ಚಿಪ್ಪು, ಒಡೆದ ಬಾಟಲಿಯಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ, ಅವುಗಳನ್ನು ಸೂಕ್ತ ವಿಲೇವಾರಿ ಮಾಡುವುದು, ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸುವುದು, ಶುದ್ಧವಾದ ನೀರು, ತಾಜಾ ಆಹಾರದ ಸೇವನೆ ಮಾಡಬೇಕು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಡಾ.ಸುನೀಲಕುಮಾರ ಎ.ವಂಟಿ, ಮಾನಸಿಕ ಆರೋಗ್ಯ ಸಮಾಲೋಚಕ ಶರಣು ಪೂಜಾರಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾರಿ, ರೇಶ್ಮಾ ನಕ್ಕುಂದಿ, ಮಂಗಲಾ ಚಂದಾಪುರೆ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಶ್ರೀದೇವಿ ಸಾಗರ, ಚಂದ್ರಕಲಾ ಮಠಪತಿ, ನಾಗಮ್ಮ ಚಿಂಚೋಳಿ, ಸಿದ್ರಾಮ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.