ಕೌಶಲ್ಯ ಪ್ರತ್ಯೇಕ ವಿಷಯವಾಗಿಸಲು ಒತ್ತಾಯ
ಬೀದರ್: ಜೂ.20:ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕೌಶಲ ವಿಷಯವನ್ನು ಪ್ರತ್ಯೇಕ ವಿಷಯವನ್ನಾಗಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅವರ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ನಿಯೋಗದಲ್ಲಿ ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.
9ನೇ ತರಗತಿ ವಿದ್ಯಾರ್ಥಿಗಳಿಗೆ ನಾಷನಲ್ ಸ್ಕಿಲ್ಸ್ ಕ್ವಾಲಿಫಿಕೆಷನ್ಸ್ ಫ್ರಾಮ್‍ವರ್ಕ್(ಎನ್‍ಎಸ್‍ಕ್ಯೂಎಫ್) ಅಡಿಯಲ್ಲಿ ಕೌಶಲ ಆಧಾರಿತ ತರಬೇತಿ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಇದು, ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಆಗಲು ನೆರವಾಗಲಿದೆ. ಆದರೆ, ತೃತೀಯ ಭಾಷೆ ಬದಲು ಕೌಶಲಕ್ಕೆ ಅವಕಾಶ ನೀಡಿರುವುದರಿಂದ ಅದನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಹಿಂದಿ ಕಲಿಕೆಯಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.
ಸದ್ಯ ಪ್ರೌಢಶಾಲೆಗಳಲ್ಲಿ ತ್ರಿ ಭಾಷಾ ಸೂತ್ರ ಜಾರಿಯಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂವಹನಕ್ಕಾಗಿ ಇಂಗ್ಲಿಷ್, ರಾಷ್ಟ್ರಮಟ್ಟದಲ್ಲಿ ಹಿಂದಿ ಹಾಗೂ ರಾಜ್ಯಮಟ್ಟದಲ್ಲಿ ಸಂವಹನಕ್ಕೆ ಕನ್ನಡ ಬೋಧಿಸಲಾಗುತ್ತಿದೆ. ಹೀಗಾಗಿ ಕೌಶಲ ವಿಷಯದ ಕಾರಣ ಹಿಂದಿಯಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಸಂವಹನಕ್ಕೆ ಸಮಸ್ಯೆಯಾಗಲಿದೆ. ದೇಶದ ವಿವಿಧ ಭಾಗಗಳಿಗೆ ಉದ್ಯೋಗಕ್ಕೆ ಹೋಗಲು ಕಷ್ಟವಾಗಲಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೌಶಲ ವಿಷಯವನ್ನು ತೃತೀಯ ಭಾಷೆ ಬದಲು ಆಯ್ಕೆ ಮಾಡಿಕೊಳ್ಳುವ ಬದಲಾಗಿ ಪ್ರತ್ಯೇಕ ವಿಷಯವಾಗಿ ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಪ್ರಮುಖರಾದ ಲಕ್ಷ್ಮಣ ತುರೆ, ಶಿವಾಜಿ ಧನೆ, ರಾಜಕುಮಾರ ಸಿರಾಜಿ, ಎಂ.ಡಿ. ಪ್ರಮೋದ್ ಸಗ್ಗಂ, ಶಿವಕುಮಾರ ಸದಾಫುಲೆ, ರವಿಕುಮಾರ ಕುಮನೋರ, ಎಂ.ಡಿ. ಶಾಬೊದ್ದಿನ್, ವೈಜಿನಾಥ ಸಾಳೆ, ಸಂಜೀವನ್ ಭೋಸ್ಲೆ ಇದ್ದರು.