ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು-  ಶಾಸಕ ಡಾ.ಎನ್.ಟಿ.ಶ್ರೀನಿವಾಸ್
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.20 :-  ಹಿಂದುಳಿದ ತಾಲೂಕಿನ ಗಡಿಭಾಗದ  ಗ್ರಾಮೀಣ ಜನರಿಗೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿ ಅದರಂತೆ ಶಾಸಕನಾದ  ಒಂದು ವರ್ಷದ ಅವಧಿಯಲ್ಲಿ ಕೂಡ್ಲಿಗಿಯ ಸಾರಿಗೆ ಸಂಸ್ಥೆ ಘಟಕಕ್ಕೆ 19 ನೂತನ  ಬಸ್‌ಗಳು ತರಲು  ಶ್ರಮಿಸಿದ್ದು, ಇನ್ನಷ್ಟು ನೂತನ  ಬಸ್‌ಗಳಿಗೆ ಸಾರಿಗೆ ಸಚಿವರೊಂದಿಗೆ ಚರ್ಚೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ನೂತನ  ನಾಲ್ಕು  ಬಸ್‌ಗಳ ಸಂಚಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡುತ್ತಾ  ಕೋವಿಡ್ 19ರ  ಸಮಯದಲ್ಲಿ ತಾಲೂಕಿನ ನಾನಾ ಭಾಗಗಳ ಮಾರ್ಗದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ತಾಲೂಕಿನ ಗಡಿ ಸೇರಿ ನಾನಾ ಹಳ್ಳಿಗಳ ಜನರು ಪರ ಊರುಗಳಿಗೆ ಹೋಗಿ ಬರಲು ತುಂಬಾ ಕಷ್ಟ ಪಡುತ್ತಿದ್ದರು. ನಾನು ಕ್ಷೇತ್ರದ  ಶಾಸಕನಾದ ನಂತರ ಹಳ್ಳಿಗಳ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸುವ ಮೂಲಕ ಸಾರ್ವಜನಿಕರಿಗೆ  ಅನುಕೂಲವಾಗಲು ಬಹುತೇಕ ಹಳೆಯ ಮಾರ್ಗಗಳ ಜತೆ ಹೊಸ ಮಾರ್ಗಗಳಿಗೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಹೊಸ ಬಸ್‌ಗಳನ್ನು ತಾಲೂಕಿಗೆ ತರುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಣೆ  ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ರಸ್ತೆ ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಮುಖಂಡರಾದ ದಿನ್ನೆ ಮಲ್ಲಿಕಾರ್ಜುನ, ಎನ್.ವಿ.ತಮ್ಮಣ್ಣ, ಹೋಟೆಲ್ ಬಾಲರಾಜಣ್ಣ, ಡಾಣಿ ರಾಘವೇಂದ್ರ, ಜಿಲಾನ್, ಬಣವಿಕಲ್ಲು ಯರಿಸ್ವಾಮಿ, ವೀರಭದ್ರಪ್ಪ, ಉಪ್ಪಾರ ರಾಘವೇಂದ್ರ, ಶೋಭಾ, ಸಿ.ಎಸ್.ಪುರ ಬಸವರಾಜ, ಮೇಲ್ವಿಚಾರಕರಾದ ಎಚ್.ಕೆ.ವಿಶ್ವನಾಥ, ಜಿ.ಮಾರುತಿ, ಸಂಚಾರ ನಿಯಂತ್ರಕರಾದ ಬಣವಿಕಲ್ಲು ಶರಣಪ್ಪ, ರತ್ನಮ್ಮ,  ಜ್ಯೋತಿ ಸೇರಿ ತಾಂತ್ರಿಕ ಸಿಬ್ಬಂದಿ  ವನಜ ನೇತ್ರ ಉಷಾ, ವಾಣಿ ಬಾನು ಭುವನೇಶ್ವರಿ ಇತರರಿದ್ದರು.