ಕೆರೆಗಳು ಖಾಲಿ ಖಾಲಿ: ಪಾಚುಗಟ್ಟಿದ ಕೆರೆ ನೀರು
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.20: ಉಪ್ಪಾರ ಹೊಸಳ್ಳಿ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಕೆರೆ ಹಾಗೂ ಮೈಲಾಪುರ ಕೆರೆ ಬಹುತೇಕ ಖಾಲಿಯಾಗಿದ್ದು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಫರಿತಪಿಸುವಂತಾಗಿದೆ.
ತಾಲ್ಲೂಕಿನ ಉಪ್ಪಾರ ಹೊಸಳ್ಳಿ, ಬಲಕುಂದಿ, ಮೈಲಾಪುರ ಗ್ರಾಮಗಳ 14 ಸಾವಿರ ಜನ ವಸತಿಗೆ ಸರಬರಾಜು ಮಾಡುವ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡದ ಗುತ್ತಿಗೆದಾರರಿಂದಾಗಿ ಕೆರೆಗಳು ಖಾಲಿಯಾಗಿವೆ. ಅಲ್ಲದೆ ತಳಮುಟ್ಟಿದ ನೀರನ್ನು ಗ್ರಾಮಕ್ಕೆ ಹತ್ತು ದಿನಕ್ಕೊಮ್ಮೆ ಬಿಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮೈಲಾಪುರ ಕೆರೆಯು ಬಹುತೇಕ ಖಾಲಿಯಾಗಿದೆ ಹಾಗೂ ಉಳಿದ ನೀರು ಪಾಚಿಗಟ್ಟಿದೆ ಇದೇ ನೀರನ್ನು ಸಂಗ್ರಹಿಸಿ ಸರಬರಾಜು ಮಾಡುತ್ತಿದ್ದು, ಗ್ರಾಮಸ್ಥರಿಗೆ ರೋಗ ರುಜಿನ ಬಂದರೆ ಯಾರು ಜವಾಬ್ದಾರಿ ಎಂದು ಗಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಟ್ಟ ಆರ್. ಓ ಪ್ಲಾಂಟ್ ಗಳನ್ನು ರಿಪೇರಿ ಮಾಡುವಂತೆ  ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ ಅಳಲು ತೋಡಿಕೊಂಡರು.
 ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಜಲ ಜೀವನ್ ಮಿಷನ್ ಕಾಮಗಾರಿಯು ಎಲ್ಲಾ ಗ್ರಾಮಗಳಲ್ಲಿಯು ಅಪೂರ್ಣಗೊಂಡಿದೆ ಹಾಗೂ ಕಾಲುವೆಯಿಂದ ಕೆರೆಗೆ ನೀರು ತುಂಬಿಸುವಲ್ಲಿ ಗುತ್ತಿಗೆದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ, ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಿಸದೆ ಇರುವುದು ನೀರಿನ ಸಮಸ್ಯೆಗೆ ಮೂಲವಾಗಿದೆ ಎಂದು  ಬಲಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎಂ ಸುನಿತ ರುದ್ರಮುನಿ ತಿಳಿಸಿದ್ದಾರೆ.