ಯೋಗ ಮಾಡಿ.. ನಿರೋಗಿಯಾಗಿ..ಪತಂಜಲಿ, ಆಯುಷ ಇಲಾಖೆಯಿಂದ ಯೋಗ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
ಹೊಸಪೇಟೆ 20: ಯೋಗ ಮಾಡಿ ನಿರೋಗಿಯಾಗಿ ಎಂಬ ಧೈಯದೊಂದಿಗೆ ಆರಂಭವಾಗಿರುವ “ವಿಶ್ವ ಯೋಗ”ದಿನದ ಜಾಗೃತಿಗಾಗಿ ಆಯುಷ ಇಲಾಖೆ, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಜಿಲ್ಲಾಡಳಿತ ಅದ್ದೂರಿ ಜಾಗೃತಿ ಜಾಥಾ ಹೊಸಪೇಟೆಯಲ್ಲಿ ಆಯೋಜಿಸಿತು.
ಹೊಸಪೇಟೆಯ ಫ್ರೀಡಂ ಪಾರ್ಕ್‍ನಲ್ಲಿ ವಿಶ್ವ ಯೋಗದಿನದ ಅಂಗವಾಗಿ ಉಭಯ ಇಲಾಖೆಗಳು ವಿವಿಧ ಸಂಘ ಸಂಸ್ಥೆಗಳಾದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಹೊಸಪೇಟೆ ಛೇಂಬರ್ ಆಪ್ ಕಾರ್ಮಸ್ ಸೇರಿದಂತೆ ವಿವಿದ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೈಕ್ ಜಾಥ ಉಚಿತ ಯೋಗ ಜ್ಞಾನ, ಪ್ರಾಣಾಯಾಮಗಳ ಮಹತ್ವ ಅರಿತು ಜೂನ್ 21 ರಂದು ಆಚರಿಸುವ ವಿಶ್ವ ಯೋಗದಿನದ ಪೂರ್ವಭಾವಿಯಾಗಿ ಹೊಸಪೇಟೆ ನಗರದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥವು ಫ್ರೀಡಂ ಪಾರ್ಕ್‍ನಿಂದ ಆರಂಭವಾಗಿ ಬಸ್ ನಿಲ್ದಾಣ, ಮೂರಂಗಡಿ ವೃತ್ತ. ಜಂಬೂನಾಥ ಫೀಡರ್ ರಸ್ತೆ, ಬಳ್ಳಾರಿ ವೃತ್ತ, ವಡಕರಾಯ ದೇವಸ್ಥಾನದ ಮುಂದಿನಿಂದ ಮೇನ್ ಬಜಾರ್, ಮಾಸ್ಕ್, ವೀರಮದಕರಿ ವೃತ್ತ, ವಾಲ್ಮೀಕಿ ವೃತ್ತ, ಮಾರ್ಕಂಡೇಶ್ವರ ವೃತ್ತ, ನೂರು ಹಾಸಿಗೆ ಆಸ್ಪತ್ರೆ ರಸ್ತೆ, ಕಾಲೇಜು ರಸ್ತೆ, ಪುನೀತ್ ರಾಜಕುಮಾರ ವೃತ್ತದ ಮೂಲಕ ಫ್ರೀಡಂ ಪಾರ್ಕ್ ವರೆಗೂ ಯೋಗ ಯೋಗದ ಮಹತ್ವ ತಿಳಿಸುವ ಘೋಷ ವಾಕ್ಯಗಳೊಂದಿಗೆ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಆಯುಷ ಇಲಾಖೆಯ ಡಾ.ಗುರುಬಸವರಾಜ ಮಾತನಾಡಿ ಯೋಗ ಒಂದು ಉತ್ತಮ ಹಾಗೂ ಸುಲಭವಾಗಿ ನಮ್ಮ ದೈಹಿಕ ಮಾನಸಿಕ ಸಮತೋಲನ ಸೇರಿದಂತೆ ಆರೋಗ್ಯವನ್ನು ನೀಡುವ ಸಾಧನವಾಗಿದೆ ಇದನ್ನು ಅರಿತೇ ಯೋಗವನ್ನು ಇಂದು ವಿಶ್ವವೇ ಒಪ್ಪಿಕೊಂಡಿದೆ ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಡಾ.ಎಫ್.ಟಿ.ಹಳ್ಳಿಕೇರಿ ಮಾತನಾಡಿ ಯೋಗ ಒಂದು ಸರಳ ಹಾಗೂ ಆರ್ಥಿಕ ಹೊರೆಇಲ್ಲದೆ ನಾವು ಆರೋಗ್ಯಪೂರ್ಣವಾಗಿರುವ ವಿಧಾನವಾಗಿದ್ದು ಇದರ ಮಹತ್ವವನ್ನು ನಾವು ಎಲ್ಲರಿಗೂ ತಿಳಿಸಬೇಕಾಗಿದೆ ಎಂದು ಇಂದು ಮತ್ತು ನಾಳೆ ನಡೆಯುವ ಕಾರ್ಯಕ್ರಮದ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಹೊಸಪೇಟೆ ಛೇಂಬರ್ ಆಪ್ ಕಾರ್ಮಸ್‍ನ ಅಧ್ಯಕ್ಷ ಅಶ್ವಿನಿ ಕೋತಂಬರಿ ಚಾಲನೆ ನೀಡಿದರು, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮಾನಸಾ ಅಕ್ಕ, ರೇವತಿಅಕ್ಕ, ಭೂಪಾಳ ಪ್ರಹ್ಲಾದ್, ಪತಂಜಲಿ ರಾಜ್ಯ ಸಮಿತಿಯ ಸದಸ್ಯರಾದ ಕಿರಣ್‍ಕುಮಾರ, ರಾಜೇಶ್ ಕರ್ವಾ, ಅನಂತ ಜೋಶಿ, ಶ್ರೀರಾಮ, ಬೋಡಾ ರಾಮಣ್ಣ, ಡಾ.ಮುನಿವಾಸುದೇವರೆಡ್ಡಿ, ಡಾ.ಮಂಜುನಾಥ ಮಂಗಳಮ್ಮ, ಪ್ರಮೀಳಮ್ಮ, ಚಂದ್ರಿಕಾಶ್ರೀರಾಮ, ಶೈಲಜಾ ಕಳಕಪ್ಪ  ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು, ಪತಂಜಲಿ ಸಮಿತಿಯ ವಿವಿಧ ಕೇಂದ್ರಗಳ ಸಂಚಾಲಕರು, ಕಾರ್ಯಕರ್ತರು ಪಾಲ್ಗೊಂಡು ವಿಶ್ವ ಯೋಗದಿನದ ಪ್ಯಾಕೇಜ್ ಹಾಗೂ ಜಾಗೃತಿ ಜಾಥ ನಡೆಸಿದರು.