ವಿದೇಶಿಯರಿಗೆ ವೀಸಾ ಎಚ್ಚರಿಕೆ ಅಗತ್ಯ
ಬೆಂಗಳೂರು, ಜೂ.೨೦- ವಿದೇಶಿಯರಿಗೆ ವೈದ್ಯಕೀಯ ವೀಸಾ ಮಂಜೂರು ಪ್ರಕ್ರಿಯೆ ವೇಳೆ ಎಚ್ಚರವಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ ಉಲ್ಲೇಖಿಸಿ (ಎಫ್‌ಆರ್‌ಆರ್‌ಒ) ಹೈಕೋರ್ಟ್ ನಿರ್ದೇಶನ ನೀಡಿದೆ.
ವೈದ್ಯಕೀಯ ವೀಸಾ ನೀಡುವುದಕ್ಕೆ ನಿರಾಕರಿಸಿದ್ದ ಎಫ್‌ಆರ್‌ಆರ್‌ಒ ನಿರ್ಧಾರ ಪ್ರಶ್ನಿಸಿ ಇರಾಕ್‌ನ ಬಾಗ್ದಾದ್ ನಿವಾಸಿ ಸಗದ್ ಕರೀಂ ಇಸ್ಮಾಯಿಲ್ ಎಂಬುವರು ಸಲ್ಲಿಸಿದ್ದ ಅರ್ಜಿ ಸಂಬಂಧ ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಈ ನಿರ್ದೇಶನ ನೀಡಿದೆ.
ವೈದ್ಯಕೀಯ ವೀಸಾ ಪಡೆದು ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ, ಮೊದಲು ತಮ್ಮ ಹೆಸರನ್ನು ಸಜ್ಜದ್ ಕರೀಂ ಇಸ್ಮಾಯಿಲ್ ಎಂಬುದಾಗಿ ಇದ್ದದ್ದನ್ನು ಬಳಿಕ ಸಾಗದ್ ಕರೀಂ ಇಸ್ಮಾಯಿಲ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ ಎಂಬುದಾಗಿ ಪೀಠ ಆದೇಶದಲ್ಲಿ ವಿವರಿಸಿದೆ.
ಅಲ್ಲದೆ, ಅರ್ಜಿದಾರರು ಅವಧಿ ಮೀರಿ ನೆಲೆಸಿರುವುದ್ದರಿಂದ ನಿರ್ಗಮನ ಪರವಾನಗಿ ನೀಡಿ ಗಡಿಪಾರು ಮಾಡಲಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎರಡು ಬಾರಿ ವೈದ್ಯಕೀಯ ವೀಸಾ ನೀಡಿದ್ದು, ಎರಡು ವರ್ಷಗಳಿಗಿಂತ ಹೆಚ್ಚುಕಾಲ ನೆಲೆಸಿದ್ದಾರೆ. ಇದೀಗ ಮತ್ತೊಂದು ಅವಧಿಗೆ ವೀಸಾ ಕೋರಿರುವುದನ್ನು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.
ಜೊತೆಗೆ, ಅರ್ಜಿದಾರರು ವಿದೇಶದಲ್ಲಿ ಕುಳಿತು ತಮ್ಮ ಪರವಾಗಿ ಸ್ಪೆಷಲ್ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ಮೂಲಕ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಕಾರ್ಯಗತಗೊಳಿಸುವುದಕ್ಕೆ ಅವಕಾಶವಿಲ್ಲ. ಕಾಯಿದೆಯಲ್ಲಿ ಇಲ್ಲದ ಅವಕಾಶವನ್ನು ಅರ್ಜಿದಾರ ಕೋರಿದ್ದು, ಅವರ ವಾದ ಪುರಸ್ಕಾರಾರ್ಹವಲ್ಲ ಎಂದು ತಿಳಿಸಿ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.