ನೀಟ್ ಅಕ್ರಮ ಸಿಬಿಐ ತನಿಖೆಗೆ ಆಗ್ರಹ
ಬೆಂಗಳೂರು:ಜೂ.೨೦ ನೀಟ್ ಪರೀಕ್ಷೆ ಅಕ್ರಮ ಎನ್‌ಡಿಎಯ ದೊಡ್ಡ ಹಗರಣ. ನೀಟ್ ಅಕ್ರಮ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನೀಟ್ ಅಕ್ರಮ ಎನ್‌ಡಿಎ ಸರ್ಕಾರದ ಹಗರಣ. ನೀಟ್ ಪರೀಕ್ಷೆ ಬಗ್ಗೆ ಯುವಕರಲ್ಲಿ ಅನುಮಾನ ಇದೆ. ೨೪ ಲಕ್ಷ ಜನ ಪರೀಕ್ಷೆ ಬರೆದವರು ಆತಂಕದಲ್ಲಿ ಇದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇದರಲ್ಲಿ ಕ್ರಮ ಆಗಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದೆ. ಬುಧವಾರ ರಾತ್ರಿ ನೆಟ್ ಎಕ್ಸಾಂ ಕೂಡ ಕೇಂದ್ರ ರದ್ದು ಮಾಡಿದೆ. ಇಡೀ ದೇಶದ ಯುವಕರ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ನೀಟ್ ಪರೀಕ್ಷೆ ಕುರಿತು ಸಿಬಿಐ ತನಿಖೆ ಆಗಬೇಕು. ಯುವಕರಿಗೆ ನ್ಯಾಯ ಸಿಗಬೇಕು ಅಂದರೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು