ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ವಿಶೇಷ ಕಾಳಜಿ
ಕಲಬುರಗಿ:ಜೂ.20: ಇತ್ತೀಚಿಗೆ ಜಿಲ್ಲೆಯಲ್ಲಿ ವ್ಯಾಪಕವಾದ ಮಳೆಯಾಗಿದ್ದು ವಾತಾವರಣದ ತಂಪಾಗಿದೆ. ಡೆಂಗ್ಯೂ, ಮಲೇರಿಯಾ, ಶೀತ, ನೆಗಡಿ, ಜ್ವರ, ಅಜೀರ್ಣ ಸಮಸ್ಯೆ, ಕಾಲರಾದಂತಹ ಮುಂತಾದ ಸಾಮಾನ್ಯವಾದ ಕಾಯಿಲೆಗಳು ಕಂಡುಬರುತ್ತವೆ. ಇಂತಹ ಸಮಯದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲರು ಕೂಡಾ ಮಳೆಗಾಲದಲ್ಲಿ ವಿಶೇಷವಾದ ಕಾಳಜಿ ವಹಿಸುವುದು ಅವಶ್ಯಕವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಮಳೆಗಾಲ ಆರೋಗ್ಯದ ಮುಂಜಾಗೃತೆ ವಿಶೇಷ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡುವುದು, ಶುದ್ಧವಾದ ನೀರಿನ ಸೇವನೆ, ಸಮತೋಲಿತ ಆಹಾರವನ್ನು ಸೇವಿಸುವುದು, ಮಳೆಯಲ್ಲಿ ನೆನೆಯದಂತೆ ಲಕ್ಷ್ಯವಹಿಸುವುದು, ಆಗಾಗ್ಗೆ ಕೈ-ಕಾಲು ಚೆನ್ನಾಗಿ ಕೈತೊಳೆದುಕೊಳ್ಳುವುದು, ವಾಸಸ್ಥಳದ ಸಮೀಪ ನೀರು ನಿಲ್ಲದಂತೆ ನೋಡಿಕೊಂಡು, ಪರಿಸರ ಸ್ವಚ್ಛವಾಗಿರುವಂತೆ ಕಾಪಾಡುವುದು, ಬೀದಿ ಬದಿಯ ತೆರೆದಿಟ್ಟ ಆಹಾರ ಪದಾರ್ಥಗಳು ಸೇವಿಸದಿರುವುದು, ಶುದ್ಧವಾದ ನೀರನ್ನು ಹೆಚ್ಚಾಗಿ ಸೇವಿಸುವುದು, ಸಮತೋಲಿತ ಆಹಾರವನ್ನು ಸೇವಿಸಬೇಕೆಂದು ಅನೇಕ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಡಾ.ಸುನೀಲಕುಮಾರ ಎ.ವಂಟಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾರಿ, ರೇಶ್ಮಾ ನಕ್ಕುಂದಿ, ಮಂಗಲಾ ಚಂದಾಪುರೆ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಶ್ರೀದೇವಿ ಸಾಗರ, ಚಂದ್ರಕಲಾ ಮಠಪತಿ, ನಾಗಮ್ಮ ಚಿಂಚೋಳಿ, ಸಿದ್ರಾಮ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.