ಕೇಂದ್ರ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ
ಹುಬ್ಬಳ್ಳಿ,ಜೂ20: ಎನ್‍ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರ ಕಿಚಡಿ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದು ವಿಪ ಸದಸ್ಯ ಸಲೀಂ ಅಹ್ಮದ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಡೆಗೆ ಚಂದ್ರಬಾಬು ನಾಯ್ಡು, ಮತ್ತೊಂದು ಕಡೆಗೆ ನಿತೀಶ್ ಕುಮಾರ ಅವರ ಸಹಕಾರದಿಂದ ಸರ್ಕಾರ ನಡೆಯುತ್ತಿದೆ. ಈ ಸರ್ಕಾರದಿಂದ ದೇಶದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಸದ್ಯ ಲೋಕಸಭಾ ಚುನಾವಣೆ ಮುಗದಿದೆ. ಹೀಗಾಗಿ ರಾಜ್ಯದಲ್ಲಿ ಮೂರು ಉಪಚುನಾವಣೆಗಳು ನಡೆಯಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಸಿದ್ದತೆ ನಡೆಸಿದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಇದರ ಜೊತೆಗೆ ಬರುವ ಜಿಪಂ, ತಾಪಂ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಸಿದ್ದತೆ ಕೈಗೊಂಡಿದೆ ಎಂದರು.
ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಗ್ಯಾರಂಟಿಗಳು ನಮ್ಮ ಸರ್ಕಾರದ ಬದ್ದತೆ, ನಮ್ಮ ಸಂಕಲ್ಪವಾಗಿದೆ ಎಂದು ಅವರು ತಿಳಿಸಿದರು.
ಶಿಗ್ಗಾಂವಿ ವಿಧಾನಸಭಾ ಮತ ಕ್ಷೇತ್ರದ ಉಪಚುನಾವಣೆಗೆ ನೀವೂ ಒಬ್ಬ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನಾನು ಈಗಾಗಲೇ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಮೂರು ಕ್ಷೇತ್ರದಲ್ಲಿ ವೀಕ್ಷಕರು ಬರುತ್ತಾರೆ. ಅವರು ವರದಿ ತಯಾರಿಸುತ್ತಾರೆ. ವರಿಷ್ಠರು ಏನು ನಿರ್ಣಯ ತೆಗೆದುಕೊಳ್ಳತ್ತಾರೋ ಅದಕ್ಕೆ ನಾನು ಬದ್ದ ಎಂದವರು ಹೇಳಿದರು.