ಡೆಂಗ್ಯೂ ಅರಿವು ಮೂಡಿಕೆ ಕಾರ್ಯಕ್ರಮ
ಹುಬ್ಬಳ್ಳಿ,ಜೂ20 : ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ, ಅವರು ತಮ್ಮ ತಂದೆ ತಾಯಿಗಳಿಗೆ ತಿಳುವಳಿಕೆ ನೀಡುತ್ತಾರೆ. ಡೆಂಗ್ಯೂ ಒಂದು ಮಾರಕ ರೋಗವಾಗಿದೆ. ಕರೋನಾ ವಾರಿಯರ್ಸರಂತೆ ಡೆಂಗ್ಯೂ ವಾರಿಯರ್ಸಗಳಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಶಾಸಕರಾದ ಮಹೇಶ ಟೆಂಗಿನಕಾಯಿ ಹೇಳಿದರು.
ಮೂರು ಸಾವಿರ ಮಠದ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಡೆಂಗ್ಯೂ ಜ್ವರ ಮುಂಜಾಗ್ರತೆಯ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರೆ, ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ, ನಾಲಾ ಹೂಳೆತ್ತುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಘನ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಎಲ್ಲರೂ ತಂಡವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ. ಎಲ್ಲರೂ ಒಟ್ಟಿಗೆ ಸೇರಿ ಕಾರ್ಯನಿರ್ವಹಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪಾಲಿಕೆ ಆಯೋಜಿಸಬೇಕು. ಕೋವಿಡ್ ಸಂದರ್ಭದಲ್ಲಿ ಅನೇಕ ಜನರು ಸಾವನ್ನಪ್ಪಿದರು. ಹೀಗಾಗಿ ಅಂತಹ ಪರಿಸ್ಥಿತಿ ಮತ್ತೆ ಮರುಕಳಿಸಬಾರದು. ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಳೆಗಾಲವಿರುವುದರಿಂದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಎಲ್ಲಾ ವಾರ್ಡಗಳನ್ನು ಸ್ವಚ್ಛಗೊಳಿಸಲು ಪಾಲಿಕೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ರಾಜ್ಯದಲ್ಲೇ ಅಪರೂಪದ ಕಾರ್ಯಕ್ರಮವಾಗಿದೆ. ಡೆಂಗ್ಯೂ ಹರಡುವುದನ್ನು ನಿಯಂತ್ರಣಕ್ಕೆ ತರಬೇಕಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಡೆಂಗ್ಯೂ ಜ್ವರ ಮುಂಜಾಗ್ರತಾ ಕ್ರಮಗಳ ಬಗ್ಗೆ ಮನೆಯವರು, ನೆರೆಹೊರೆಯದವರಿಗೆ ತಿಳಿಯಪಡಿಸಬೇಕು. ಸೊಳ್ಳೆಗಳ ನಿರ್ಮೂಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮನೆಗಳಲ್ಲಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿಗಳನ್ನು ಬಳಸಬೇಕು. ನಾಲಾಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ನಿಮ್ಮ ಪ್ರದೇಶದಲ್ಲಿ ನಾಲಾ, ಚರಂಡಿ ಸ್ವಚ್ಚಗೊಳಿಸದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ವ್ಯಾಟ್ಸಾಪ್ ಮೂಲಕ ದೂರು ಸಲ್ಲಿಸಬಹುದು. ವಿವಿಧ ಪ್ರದೇಶಗಳಲ್ಲಿ ಫಾಂಗಿಂಗ್ ಕೂಡ ಮಾಡಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ದಾಖಲಾದ ಪ್ರದೇಶಗಳಲ್ಲಿನ ಪ್ರತಿ ಮನೆ ಮನೆಗೆ ಆರೋಗ್ಯ ಸಿಬ್ಬಂದಿ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಆ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿದ್ಧ ವಹಿಸಿದ್ದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಕುರಿತು ತಮ್ಮ ತಂದೆ ತಾಯಿಯವರಿಗೆ ತಿಳುವಳಿಕೆ ನೀಡಬೇಕು. ಮನೆಯ ಮುಂದೆ ನೀರು ಸಂಗ್ರಹಣೆ ಆಗದಂತೆ ನೋಡಿಕೊಳ್ಳಬೇಕಿದೆ. ಆರೋಗ್ಯ ಬಹಳ ಮುಖ್ಯ. ದುಡ್ಡಿಗಿಂತ ಆರೋಗ್ಯ ಹೆಚ್ಚು. ಆರೋಗ್ಯವನ್ನು ಒಂದು ಸಲ ಕಳೆದುಕೊಂಡರೆ ದುಡ್ಡಿನಿಂದ ಮರಳಿ ಕೊಳ್ಳಲಾಗದು. ಹೀಗಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು. ಉತ್ತಮ ಪರಿಸರವನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾಗಬೇಕು. ಡೆಂಗ್ಯೂ ರೋಗವನ್ನು ನಿಯಂತ್ರಣ ಮಾಡಲು ಎಲ್ಲರೂ ಮುಂದಾಗಬೇಕಿದೆ ಎಂದು ಅವರು ನುಡಿದರು.
ಆರೋಗ್ಯ ಮೇಲ್ವಿಚಾರಾಣಾಧಿಕಾರಿ ಕೆ.ಐ.ಶ್ಯಾವಿ ಮಾತನಾಡಿ, ಜಿಲ್ಲೆಯಲ್ಲಿ 168 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂ ಕುರಿತು ಭಯಬೇಡ. ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.
ಮಹಾಪೌರರಾದ ವೀಣಾ ಭಾರದ್ವಾಡ್ ಅವರ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಡೆಂಗ್ಯೂ ಹರಡುವಿಕೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.ಕಾರ್ಯಕಮದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ, ಪಾಲಿಕೆ ಸದಸ್ಯರಾದ ಸುನೀತಾ ಬುರಬುರೆ, ಮೀನಾಕ್ಷಿ ವಂಟಮೂರಿ, ಚಂದ್ರಿಕಾ, ಪ್ರೀತಿ, ಸಭಾನಾಯಕ ಶಿವು ಹಿರೇಮಠ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಆರೋಗ್ಯಾಧಿಕಾರಿ ಶ್ರೀಧರ ದಂಡೆಪ್ಪನ್ನವರ ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾಧ್ಯಾಪಕರು, ಶಿಕ್ಷಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು. ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಸಿ.ಬೇವೂರ ನಿರೂಪಿಸಿ, ವಂದಿಸಿದರು.