ಮದ್ಯವರ್ಜನ ಶಿಬಿರ
ನವಲಗುಂದ,ಜೂ20 : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗಡೆಯವರು ಮಾಡುವಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದ ಕಾರ್ಯಕ್ರಮ ಈ ಮಧ್ಯವರ್ಜನ ಶಿಬಿರ ಈ ಕಾರ್ಯಕ್ರಮದ ಮುಖಾಂತರ ರಾಜ್ಯದ ಲಕ್ಷಾಂತರ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ನವಲಗುಂದ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಮನಕವಾಡ ಗ್ರಾಮದ ಮೃತ್ಯುಂಜಯ ಸ್ವಾಮಿಗಳ ದಾಸೋಹ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1083 ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೆಗಡೆಯವರು ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಹೊರಟಿದ್ದು ನಾವೆಲ್ಲರೂ ಕೈಜೋಡಿಸೋಣ ಹೇಳಿದರು,
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಯೋಗೀಶ ಮಾತನಾಡಿ ಮದ್ಯ ವ್ಯಸನದಿಂದ ಇವತ್ತು ಸಮಾಜದಲ್ಲಿ ಲಕ್ಷಾಂತರ ಕುಟುಂಬಗಳು ಹಾಳಾಗಿದ್ದು, ಹೆಣ್ಣು ಮಕ್ಕಳ ಬದುಕನ್ನ ಸಂಕಷ್ಟಕ್ಕೆ ದೂಡಿದಂತಾಗಿದೆ, ಇದರಿಂದ ಕುಟುಂಬಗಳ ನೆಮ್ಮದಿಯು ಹಾಳಾಗಿದೆ, ಪೂಜ್ಯರು ಮಧ್ಯವರ್ಜನ ಶಿಬಿರದಂತಹ ಕಾರ್ಯಕ್ರಮದಿಂದ ಮದ್ಯ ವ್ಯಸನಿಗಳನ್ನ ಸಮಾಜದ ಮುಖ್ಯ ವಾಹಿನಿಗೆ ತರಲು ಮತ್ತು ನೆಮ್ಮದಿಯ ಬದುಕನ್ನು ರೂಪಿಸಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ನೆಲವಡಿ ಗ್ರಾಮ ಪಂಚಾಯತಿ ಅದ್ಯಕ್ಷೆ ದೇವಕ್ಕ ತಳವಾರ್ ಅಧ್ಯಕ್ಷತೆ ವಹಿಸಿದ್ದರು.
1083ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹುತ್ತಪ್ಪ ಇಂಗಳಹಳ್ಳಿ, ಮಂಜುನಾಥ ಅಕ್ಕಿ, ಶಾಂತವೀರನಗೌಡ ವಿ ಪಾಟೀಲ್, ಮಹಾದೇವಪ್ಪ ಡೊಳ್ಳಿನ, ಶೇಖಪ್ಪ ಕುಂದಗೋಳ, ಯೋಜನಾಧಿಕಾರಿ ದಿನೇಶ ಶೇರಿಗಾರ್, ನಾಗೇಶ್ ಹಾಗೂ ಸಮಿತಿ ಸದಸ್ಯರು ಶಿಬಿರಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ನವ ಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ಘಟಕದ ಸದಸ್ಯರು ಭಾಗವಹಿಸಿದ್ದರು.