ವನ್ಯ ಸಂಪತ್ತು ಹೆಚ್ಚಿದಾಗ ಶುದ್ಧ ಗಾಳಿ-ನೀರು ಸಿಗಲು ಸಾಧ್ಯ
ಚನ್ನಮ್ಮನ ಕಿತ್ತೂರು,ಜೂ20: ಲಭ್ಯವಿರುವ ಸ್ಥಳಗಳಲ್ಲಿ ಪ್ರತಿಯೊಬ್ಬರು ಮರ-ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮುಂದಿನ ಪಿಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಬೀಡಿ ಕ್ರಾಸ್ ಹತ್ತಿರದ ಅರಣ್ಯ ಕಚೇರಿ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವನ್ಯ ಸಂಪತ್ತನ್ನು ಹೆಚ್ಚಿಸಿದಾಗ ಸ್ವಚ್ಛ ಗಾಳಿ, ನೀರು ಹಾಗೂ ಶುದ್ಧ ವಾತಾವರಣ ಸಿಗಲು ಸಾಧ್ಯ. ಇಂದು ಅನೇಕ ರೋಗಗಳು ಅಂಟಿಕೊಳ್ಳಲು ವಾತಾವರಣದ ವೈಪರಿತ್ಯವೇ ಕಾರಣ ಎಂಬುವುದನ್ನು ಅಲ್ಲೆಗಳೆಯುವಂತಿಲ್ಲ. ಆದ್ದರಿಂದ ಪ್ರತಿಯೊಬ್ಬರು ಒಂದು ಸಸಿ ನೆಟ್ಟು ಮೂರು ವರ್ಷಗಳ ಕಾಲ ಪೋಷಣೆ ಮಾಡಿದರೆ ಮುಂದಿನ ಪೀಳಿಗೆಗೆ ನೆಮ್ಮದಿಯ ದಿಗಳು ಬರಲಿವೆ ಎಂದರು.
ಕಿತ್ತೂರು ಅರಣ್ಯ ಅಧಿಕಾರಿ ಸಂಜೀವ ಮಗದುಮ ಮಾತನಾಡಿ ಆರೋಗ್ಯಕಕ ಬದುಕು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಮಹತ್ವದ್ದು. ಅದಕ್ಕಾಗಿ ನಾವು ಮರಗಿಡಗಳನ್ನು ಹೆಚ್ಚಾಗಿ ಬೆಳೆಯುವುದು ಅಗತ್ಯ. ಹೆಚ್ಚುತ್ತಿರುವ ಭೂಮಿ ತಾಪಮಾನ ಕಡಿಮೆ ಮಾಡಲು ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬರು ಸಸಿ ನೆಟ್ಟು ಉಳಿಸಿ ಬೆಳಸಬೇಕಾದ ಅಗತ್ಯವಿದೆಯೆಂದು ಕರೆ ನೀಡಿದರು.
ಈ ವೇಳೆ ಕಿತ್ತೂರು-ಬೈಲಹೊಂಗಲ ತಾಪಂ ಇಓಗಳು, ಕಿತ್ತೂರ ಸಿಡಿಪಿಓ, ಬಿಇಓ, ತಾಪಂ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳಿದ್ದರು.